ಮುಂಬೈ: ಬಾಲಿವುಡ್ ಶಿಲ್ಪಾ ಶೆಟ್ಟಿ ದಂಪತಿ ಹಾಗೂ ಶೆರ್ಲಿನ್ ಚೋಪ್ರಾ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ಅವರ ವಿರುದ್ಧ ದೂರು ದಾಖಲು ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ ವಿರುದ್ಧ ತಿರುಗಿಬಿದ್ದಿದ್ದ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಟಿ ಶೆರ್ಲಿನ್ ಇದೀಗ 75 ಕೋಟಿ ರೂ. ಪರಿಹಾರ ಕೇಳಿದ್ದಾರೆ.
75 ಕೋಟಿ ರೂ. ಪರಿಹಾರ ಕೇಳಿದ ಶೆರ್ಲಿನ್ ಏನಿದು ಪ್ರಕರಣ?
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ನನಗೆ ಭೂಗತ ಜಗತ್ತಿನ ಬೆದರಿಕೆ ಹಾಕಿದ್ದಾರೆಂದು ಆರೋಪ ಮಾಡಿದ್ದಾರೆ. ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕಾಗಿ 75 ಕೋಟಿ ರೂ. ಪರಿಹಾರ ನೀಡುವಂತೆ ಕೋರಿ ನೋಟಿಸ್ ಕಳುಹಿಸಿದ್ದೇನೆ ಎಂದಿದ್ದಾರೆ.
ಅಕ್ಟೋಬರ್ 14ರಂದು ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದ ನಟಿ ಶೆರ್ಲಿನ್ ಚೋಪ್ರಾ, ಶಿಲ್ಪಾ ಶೆಟ್ಟಿ ನನಗೆ ಕುಂದ್ರಾ ಜೊತೆ ಒಪ್ಪಂದಕ್ಕೆ ಸಹಿ ಹಾಕುವಂತೆ ಆಮಿಷವೊಡ್ಡಿದ್ದರು. ಭೂಗತ ಸಂಪರ್ಕ ಹೊಂದಿರುವ ಕುಂದ್ರಾ, ತನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು. ಮೂರು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಇದುವರೆಗೂ ಹಣ ಪಾವತಿಸಿಲ್ಲ ಎಂದು ಹೇಳಿದ್ದರು. ಇದಕ್ಕೆ ತಿರುಗಿಬಿದ್ದ ಶಿಲ್ಪಾ ಶೆಟ್ಟಿ ದಂಪತಿ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಜೊತೆಗೆ ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದರು.
ಇದನ್ನೂ ಓದಿರಿ:ತಿರುಗಿಬಿದ್ದ ಶಿಲ್ಪಾ, ರಾಜ್ ಕುಂದ್ರಾ.. ನಟಿ ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಇದಕ್ಕೆ ವಿರುದ್ಧವಾಗಿ ಶೆರ್ಲಿನ್ ಇದೀಗ 75 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್ ಕಳುಹಿಸಿದ್ದಾರೆ. ಜೊತೆಗೆ ನನಗೆ ಮಾನನಷ್ಟ ನೋಟಿಸ್ ಕಳುಹಿಸಲಾಗಿದೆ. ಆದರೆ ನಾನು ಹೆದರುವುದಿಲ್ಲ. ನನ್ನ ಹೇಳಿಕೆ ದಾಖಲು ಮಾಡಿಕೊಳ್ಳುವಂತೆ ನಾನು ಪೊಲೀಸರ ಬಳಿ ವಿನಂತಿ ಮಾಡಿದ್ದೇನೆ. ಜೊತೆಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಕ್ಕಾಗಿ 75 ಕೋಟಿ ರೂ. ನೀಡುವಂತೆ ಕೇಳಿದ್ದೇನೆ ಎಂದಿದ್ದಾರೆ.