ಠಾಣೆ (ಮಹಾರಾಷ್ಟ್ರ):ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿಯ ಜೀವನದಲ್ಲಿ ಲವ್ ಸೆಕ್ಸ್ ದೋಖಾ ಹಿಂದಿ ಚಲನಚಿತ್ರದ ರೀತಿಯಲ್ಲಿ ಘಟನೆಗಳು ಘಟಿಸಿದ್ದು ಅಚ್ಚರಿಯಾದರೂ ನಿಜ. ಈ ಯುವತಿಯು ಒಬ್ಬಾತನ ಪ್ರೀತಿಯ ಬಲೆಗೆ ಬಿದ್ದಿದ್ದಳು.
ಪ್ರೀತಿಯ ನಾಟಕವಾಡುತ್ತಲೇ ಆತ ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆದರೆ, ಇದೆಲ್ಲ ಸಾಕು ನಾವಿನ್ನು ಲಗ್ನವಾಗೋಣ ಎಂದಾಗ ಮಾತ್ರ ಆತ ತನ್ನ ಅಸಲಿ ಬಣ್ಣ ತೋರಿಸಲಾರಂಭಿಸಿದ್ದ. ಹೀಗಾಗಿ ಯುವತಿಯು ಬೇರೆ ದಾರಿ ಕಾಣದೇ ಆನ್ಲೈನ್ ಮೂಲಕ ವಿಷ ತರಿಸಿ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು.
ಈ ಪ್ರಕರಣ ಬದಲಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಮುಂದಾಗಿದ್ದಾರೆ. ಮಹೇಂದ್ರ ವಸಂತ ಭೋಯಿರ್ ಈತನೇ ಯುವತಿಗೆ ವಂಚಿಸಿದ ಯುವಕನಾಗಿದ್ದಾನೆ.
ಸಂತ್ರಸ್ತೆಯು ಕಳೆದ 5 ತಿಂಗಳಿಂದ ಬದಲಾಪೂರ ಪೂರ್ವ ಭಾಗದ ಖರವಾಯಿ ಎಂಬಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದಳು. ಆದರೆ, ಇದಕ್ಕೂ ಮುನ್ನ ಆಕೆ ಉಲ್ಹಾಸ ನಗರದ ಮಾಣೇರೆ ಗ್ರಾಮದಲ್ಲಿ ವಾಸಿಸುತ್ತಿದ್ದು, 2017 ರಲ್ಲಿ ಅದೇ ಪರಿಸರದಲ್ಲಿ ವಾಸಿಸುತ್ತಿದ್ದ ಮಹೇಂದ್ರನೊಂದಿಗೆ ಆಕೆಯ ದೋಸ್ತಿ ಆಗಿತ್ತು. ವರ್ಷ ಕಳೆಯುವಷ್ಟರಲ್ಲಿ ಇವರ ದೋಸ್ತಿ ಲವ್ ಆಗಿ ಬದಲಾಗಿತ್ತು. ಆದರೆ, ಪ್ರೇಮದ ಹೆಸರಲ್ಲಿ ಆತ ಕಿರುಕುಳ ನೀಡಿದ್ದರಿಂದ ಅವಳು ಆತನೊಂದಿಗೆ ಮಾತು ನಿಲ್ಲಿಸಿದ್ದಳು.