ನವದೆಹಲಿ:2022-23ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಾತನಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಗುಸು ಗುಸು ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಸದಾ ಒಂದಿಲ್ಲೊಂದು 'ವಿಭಿನ್ನ' ಕಾರಣಗಳಿಂದ ಟ್ರೋಲ್ಗೊಳಗಾಗುವ ಶಶಿ ತರೂರ್ ಇದೀಗ ಮತ್ತೆ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾರೆ. ಅದಕ್ಕೆ ಕಾರಣವಾಗಿದ್ದು, ಸಂಸತ್ತಿನಲ್ಲಿ ಸಂಸದೆ ಸುಪ್ರಿಯಾ ಸುಳೆ ಜೊತೆ ಮಾತನಾಡುತ್ತಾ ಕುಳಿತುಕೊಂಡಿದ್ದ ಭಂಗಿ.
ಸದನದಲ್ಲಿ ಫಾರೂಕ್ ಅಬ್ದುಲ್ಲಾ ಮಾತನಾಡುತ್ತಿದ್ದಾಗ ಅವರ ಹಿಂಭಾಗದಲ್ಲಿ ಕುಳಿತುಕೊಂಡಿದ್ದ ಶಶಿ ತರೂರ್ ಹಾಗೂ ಸುಪ್ರಿಯಾ ಸುಳೆ ಗುಸು ಗುಸು ಮಾತನಾಡುತ್ತಿದ್ದರು. ಶಶಿ ತರೂರ್ ತಾವು ಕುಳಿತುಕೊಂಡ ಡೆಸ್ಕ್ ಮೇಲೆ ಎರಡೂ ಕೈಗಳನ್ನಿಟ್ಟುಕೊಂಡು, ಅದರ ಮೇಲೆ ತಮ್ಮ ಮುಖವನ್ನಿಟ್ಟು ಮುಗುಳ್ನಗುತ್ತಾ ಮಾತನಾಡುತ್ತಿದ್ದರು. ಈ ವಿಡಿಯೋಗೆ 'ಪುಷ್ಪಾ' ಚಿತ್ರದ ಶ್ರೀವಲ್ಲಿ ಹಾಡು ಹಾಕಿ, ವೈರಲ್ ಮಾಡಲಾಗಿದೆ.
ಈ ಹಿಂದೆ ಕೂಡ ಮಹಿಳಾ ಸಂಸದೆಯರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಶಶಿ ತರೂರ್, ಕೆಲಸ ಮಾಡಲು ಲೋಕಸಭೆ ಆಕರ್ಷಕ ಸ್ಥಳವಲ್ಲ ಎಂದು ಯಾರು ಹೇಳುತ್ತಾರೆ? ಎಂಬ ಶೀರ್ಷಿಕೆ ನೀಡಿದ್ದರು. ಇದಕ್ಕೆ ಇನ್ನಿಲ್ಲದ ಟೀಕೆ ವ್ಯಕ್ತವಾಗಿತ್ತು. ಬಳಿಕ ಅವರು ಸ್ಪಷ್ಟನೆ ನೀಡಬೇಕಾಗಿತ್ತು.