ನವದೆಹಲಿ :ದೇಶದಲ್ಲಿ ನಡೆಯಲಿರುವ 2024ರ ಸಾರ್ವತ್ರಿಕ ಚುನಾವಣೆಗಳು ರೋಚಕವಾಗಿರಲಿವೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಓರ್ವ ಸರ್ವಸಮ್ಮತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾದಲ್ಲಿ ಆಡಳಿತಾರೂಢ ಬಿಜೆಪಿಗೆ ಅಗ್ನಿಪರೀಕ್ಷೆ ಎದುರಾಗಲಿದೆ ಎಂದಿದ್ದಾರೆ. 2019ರಲ್ಲಿ ಸಾರಾಸಗಟಾಗಿ ಗೆಲುವುದು ಸಾಧಿಸಿದಂತೆ ಬಿಜೆಪಿಗೆ ಈ ಬಾರಿ ಸಾಧ್ಯವಾಗಲಾರದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಒಕ್ಕೂಟದ ನೇತೃತ್ವ ವಹಿಸಬೇಕೆಂದು ನೀವು ಬಯಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಹೊರತುಪಡಿಸಿದರೆ ರಾಷ್ಟ್ರಮಟ್ಟದ ಪಕ್ಷವಾಗಿರುವ ಕಾಂಗ್ರೆಸ್ ಈಗಾಗಲೇ ಸಹಜವಾಗಿಯೇ ಆ ಸ್ಥಾನದಲ್ಲಿದೆ. ದೇಶದಲ್ಲಿ ಹಲವಾರು ಕಡೆಗಳಲ್ಲಿ ನಾವು ಬಿಜೆಪಿಗಿಂತ ಹೆಚ್ಚು ಬಲಿಷ್ಠವಾಗಿದ್ದೇವೆ. ಉದಾಹರಣೆಗೆ ನನ್ನ ತವರು ರಾಜ್ಯ ಕೇರಳ ಹಾಗೂ ತಮಿಳುನಾಡುಗಳನ್ನು ನೋಡಿ ಎಂದರು. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಸ್ಥಾನಮಾನ, ಐತಿಹಾಸಿಕ ಪರಂಪರೆ, ಬಹುಮಟ್ಟಿಗೆ ಎಲ್ಲೆಡೆ ಅಸ್ತಿತ್ವವನ್ನು ಹೊಂದಿರುವ ಪಕ್ಷ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅದು ಅನಿವಾರ್ಯವಾಗಿ ಪ್ರತಿಪಕ್ಷಗಳ ಯಾವುದೇ ಒಕ್ಕೂಟದ ಮುಂಚೂಣಿಯಲ್ಲಿರುತ್ತದೆ ಮತ್ತು ಪ್ರತಿಪಕ್ಷಗಳ ಸರ್ಕಾರ ರಚನೆಯ ಸಂದರ್ಭ ಬಂದರೂ ಅದು ಮುಂಚೂಣಿಯಲ್ಲಿರುತ್ತದೆ ಎಂದು ತರೂರ್ ಹೇಳಿದರು.
ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಕ್ರಮವಾಗಿ ಶೇ 31 ಮತ್ತು 37 ಮತಗಳನ್ನು ಗಳಿಸಿ ಜಯಶಾಲಿಯಾಗಿದೆ ಎಂದರೆ ಮುಖ್ಯವಾಗಿ ಪ್ರತಿಪಕ್ಷಗಳು ಬಿಜೆಪಿಯ ಆಟಕ್ಕೆ ಬಲಿಯಾಗಿರುವುದೇ ಕಾರಣ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ ಮತ್ತು ಇದರಿಂದ ಪಾಠ ಕಲಿಯಬೇಕಿದೆ ಎಂದು ತರೂರ್ ನುಡಿದರು. ಪ್ರತಿಪಕ್ಷಗಳ ಏಕತೆಗೆ ಒತ್ತು ನೀಡಿದ ತರೂರ್, ಇದು ಚುನಾವಣಾ ಪೂರ್ವ ಮೈತ್ರಿಯಾಗಿರಬಹುದು ಅಥವಾ ಬುದ್ಧಿವಂತಿಕೆಯಿಂದ ಸ್ಥಾನಗಳ ಆಯ್ಕೆ ಹೀಗೆ ಯಾವುದೇ ರೂಪದಲ್ಲಿರಬಹುದು. ಬಿಜೆಪಿ ವಿರುದ್ಧ ಸಾಧ್ಯವಾದಷ್ಟು ಪ್ರಬಲ ವಿರೋಧ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆತ ಸ್ಪಷ್ಟವಾದ ಮುನ್ನಡೆ ಪಡೆಯುತ್ತಾನೆ. ಅಲ್ಲದೆ ಚುನಾವಣಾ ಫಲಿತಾಂಶದ ನಂತರ ಆಗಿನ ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ತರೂರ್ ಹೇಳಿದರು.