ನವದೆಹಲಿ:ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಚುನಾವಣೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದ್ದು, ಚುನಾವಣಾ ವೇಳಾಪಟ್ಟಿಗೆ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ (ಸಿಡಬ್ಲ್ಯೂಸಿ)ಯು ಅನುಮೋದನೆ ನೀಡಿದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಹಿರಿಯ ಮುಖಂಡ ಶಶಿ ತರೂರ್ ಸೇರಿದಂತೆ ನಾಲ್ವರು ಸಂಸದರು ಚುನಾವಣೆ ಪಾರದರ್ಶಕತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಮಾಡುವ ಚುನಾವಣಾ ಪ್ರಕ್ರಿಯೆ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಐವರು ಸಂಸದರು ಎಐಸಿಸಿ ಕೇಂದ್ರ ಚುನಾವಣಾ ಪ್ರಾಧಿಕಾರದ ಮುಖ್ಯಸ್ಥ ಮಧುಸೂದನ್ ಮಿಸ್ತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮತದಾರರ ಪಟ್ಟಿಯನ್ನ ಎಲ್ಲ ಮತದಾರರು ಹಾಗೂ ಸಂಭಾವ್ಯ ಅಭ್ಯರ್ಥಿಗಳಿಗೆ ಸುರಕ್ಷಿತವಾಗಿ ಒದಗಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಶಶಿ ತರೂರ್ ಸ್ಪರ್ಧೆ? ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಪ್ರತಿಕ್ರಿಯೆ
ಪತ್ರ ಬರೆದ ಐವರು ಸಂಸದರು: ಸೆಪ್ಟೆಂಬರ್ 6ರಂದು ಕಾಂಗ್ರೆಸ್ ಪಕ್ಷದ ಸಂಸದರಾದ ಶಶಿ ತರೂರ್, ಕಾರ್ತಿ ಚಿದಂಬರಂ, ಪ್ರದ್ಯುತ್ ಬೊರ್ಡೊಲೊಯ್, ಅಬ್ದುಲ್ ಖಲೀಕ್, ಮನೀಷ್ ತಿವಾರಿ ಜಂಟಿ ಪತ್ರ ಬರೆದಿದ್ದಾರೆ. ಅಭ್ಯರ್ಥಿಯನ್ನು ನಾಮ ನಿರ್ದೇಶನ ಮಾಡಲು ಹಾಗೂ ಮತ ಚಲಾವಣೆ ಮಾಡಲು ಯಾರು ಅರ್ಹರು ಎಂಬುದನ್ನ ಪರಿಶೀಲಿಸುವ ಪಟ್ಟಿ ಎಲ್ಲರಿಗೂ ಸಿಗಬೇಕು ಎಂದು ಅವರು ತಿಳಿಸಿದ್ದಾರೆ. ಜೊತೆಗೆ ತಮ್ಮ ಬೇಡಿಕೆಯನ್ನು ತಪ್ಪಾಗಿ ವ್ಯಾಖ್ಯಾನ ಮಾಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕ ಚುನಾವಣೆಗೆ ಆಗ್ರಹ: ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಪ್ರಕ್ರಿಯೆ ಆರಂಭಗೊಳ್ಳುವುದಕ್ಕೂ ಮೊದಲು ಪ್ರದೇಶ ಕಾಂಗ್ರೆಸ್ ಸಮಿತಿ, ಪ್ರತಿನಿಧಿಗಳ ಪಟ್ಟಿ ಒದಗಿಸಬೇಕು. ಇದರಲ್ಲಿ ಯಾರು ಅರ್ಹರು ಎಂಬುದು ಗೊತ್ತಾಗುತ್ತದೆ ಎಂದಿದ್ದಾರೆ.ಇಂದು ವೇಳೆ ಪಕ್ಷ ಮತದಾರರ ಪಟ್ಟಿ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಇಷ್ಟವಿಲ್ಲದಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ಸಂಭಾವ್ಯ ಅಭ್ಯರ್ಥಿಗಳಿಗೆ ಹಂಚಿಕೊಳ್ಳಬೇಕು ಎಂದಿದೆ. ಈ ಬೇಡಿಕೆ ಈಡೇರಿಕೆಯಾಗದಿದ್ದರೆ, ಚುನಾವಣೆಯಲ್ಲಿ ಪಾರದರ್ಶಕತೆ ಬಗ್ಗೆ ಕಳವಳ ವ್ಯಕ್ತವಾಗುತ್ತದೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಬೇಕೆಂದು 2020ರಲ್ಲಿ ಸೋನಿಯಾ ಗಾಂಧಿಗೆ G-23 ನಾಯಕರು ಪತ್ರ ಬರೆದಿದ್ದರು. ಅದರಲ್ಲಿ ಶಶಿ ತರೂರ್ ಹಾಗೂ ತಿವಾರಿ ಸಹ ಇದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜಿ-23 ಗುಂಪಿನ ಸದಸ್ಯ, ಪಕ್ಷದ ಹಿರಿಯ ನಾಯಕ ಶಶಿ ತರೂರ್ ಸ್ಪರ್ಧಿಸುವ ಮಾತು ಕೇಳಿ ಬರಲು ಶುರುವಾಗಿದ್ದು, ಅದರ ಬೆನ್ನಲ್ಲೇ ಪತ್ರ ಬರೆದಿರುವುದು ಮತ್ತಷ್ಟು ಪುಷ್ಠಿ ನೀಡಿದೆ.