ಭೋಪಾಲ್ (ಮಧ್ಯಪ್ರದೇಶ): ದೇಶದ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರ ಅಂತ್ಯಕ್ರಿಯೆಯು ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸ್ವಗ್ರಾಮ ಆಂಖ್ಮೌನಲ್ಲಿ ಶನಿವಾರ ನೆರವೇರಿತು. ದೆಹಲಿಯ ಗುರುಗ್ರಾಮ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದ ಶರದ್ ಯಾದವ್ ಅವರ ಪಾರ್ಥಿವ ಶರೀರ ಇಂದು ಸ್ವಗ್ರಾಮಕ್ಕೆ ತರಲಾಯಿತು. ನಂತರ ಅವರ ಸ್ವಂತ ತೋಟದಲ್ಲಿ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ನಡೆಯಿತು.
ಗಣ್ಯರಿಂದ ಅಂತಿಮ ನಮನ:ಶರದ್ ಯಾದವ್ ಅವರ ಪಾರ್ಥಿವ ಶರೀರವು ದೆಹಲಿಯಿಂದ ವಿಮಾನದ ಮೂಲಕ ಭೋಪಾಲ್ನ ರಾಜಭೋಜ್ ವಿಮಾನ ನಿಲ್ದಾಣಕ್ಕೆ ತರಲಾಯಿತು. ನಂತರ ಮಧ್ಯಾಹ್ನ 3.15ರ ಸುಮಾರಿಗೆ ಸ್ವಗ್ರಾಮಕ್ಕೆ ಆಗಮಿಸಿತು. ಅಲ್ಲಿಂದ ಗ್ರಾಮದಲ್ಲಿರುವ ಪೂರ್ವಿಕರ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಿ ಕೆಲಕಾಲ ಇರಿಸಲಾಯಿತು. ಇಲ್ಲಿ ಕುಟುಂಬಸ್ಥರು ಮತ್ತು ಸಂಬಂಧಿಕರು ಅಂತಿಮ ದರ್ಶನ ಪಡೆದರು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಕಾಂಗ್ರೆಸ್ ಮುಖಂಡ ಸುರೇಶ್ ಅಪಚೌರಿ, ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಸಚಿವ ಮುಖೇಶ್ ಸಾಹ್ನಿ ಸೇರಿದಂತೆ ಹಲವು ಪ್ರಮುಖರು ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ನಂತರ ಸಂಜೆ 4.45ರ ಸುಮಾರಿಗೆ ಶರದ್ ಯಾದವ್ ಚಿತೆಗೆ ಪುತ್ರ ಶಂತನು ಹಾಗೂ ಪುತ್ರಿ ಸುಭಂಗಿಣಿ ಅಗ್ನಿಸ್ಪರ್ಶ ಮಾಡಿದರು.
ಶಿವರಾಜ್ - ದಿಗ್ವಿಜಯ್ ಫೋಟೋ ವೈರಲ್:ಇದೇ ವೇಳೆಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಒಟ್ಟಿಗೆ ಇರುವ ಫೋಟೋ ವೈರಲ್ ಆಗಿದೆ. ಶರದ್ ಯಾದವ್ ಅವರ ಪಾರ್ಥಿವ ಶರೀರ ಬರುವಿಕೆಗಾಗಿ ಭೋಪಾಲ್ನ ರಾಜಭೋಜ್ ವಿಮಾನ ನಿಲ್ದಾಣದಲ್ಲಿ ಈ ಇಬ್ಬರೂ ನಾಯಕರು ಒಟ್ಟಿಗೆ ಕುಳಿತು ಕಾಯುತ್ತಿರುವ ಫೋಟೋ ಇದಾಗಿದೆ.