ಮುಂಬೈ( ಮಹಾರಾಷ್ಟ್ರ): ರೈತರ ಪ್ರತಿಭಟನೆ ಕುರಿತು ನ್ಯಾಷನಲ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಡಿ. 9 ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ.
ರೈತರ ಪ್ರತಿಭಟನೆ: ಡಿ.9 ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಲಿರುವ ಶರದ್ ಪವಾರ್ - ರೈತರ ಪ್ರತಿಭಟನೆ ಕುರಿತು ಶರದ್ ಪವಾರ್ ಪ್ರತಿಕ್ರಿಯೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆ ಸಂಬಂಧ ಮಾತನಾಡಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಡಿಸೆಂಬರ್ 9 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದಾರೆ.
ಕೇಂದ್ರವು ಕೃಷಿ ಕಾನೂನುಗಳನ್ನು ತರಾತುರಿಯಲ್ಲಿ ಅಂಗೀಕರಿಸಿದೆ ಮತ್ತು ಸದ್ಯ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ ದೇಶಾದ್ಯಂತ ಹೆಚ್ಚಿನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಜಿ ಕೃಷಿ ಸಚಿವ ಪವಾರ್ ಹೇಳಿದ್ದಾರೆ." ದೆಹಲಿ ಚಲೋ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಪವಾರ್, ಪಂಜಾಬ್ ಮತ್ತು ಹರಿಯಾಣದ ರೈತರು ಗೋಧಿ ಮತ್ತು ಭತ್ತದ ಮುಖ್ಯ ಉತ್ಪಾದಕರಾಗಿದ್ದು, ಈಗ ಅವರು ಪ್ರತಿಭಟನೆಗಿಳಿದಿದ್ದಾರೆ. ಈ ಪರಿಸ್ಥಿತಿಯನ್ನು ಶೀಘ್ರವಾಗಿ ಬಗೆಹರಿಸದಿದ್ದರೆ, ದೇಶದ ಮೂಲೆ-ಮೂಲೆಯ ರೈತರು ಅವರೊಂದಿಗೆ ಕೈ ಜೋಡಿಸಿ ಪ್ರತಿಭಟಿಸುವುದನ್ನು ನಾವು ನೋಡುತ್ತೇವೆ" ಎಂದು ಶರದ್ ಪವಾರ್ ಹೇಳಿದ್ದಾರೆ.
ಇನ್ನು ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದ 300 ಕ್ಕೂ ಹೆಚ್ಚು ರೈತ ಸಂಘಟನೆಗಳು ಹಾಗೂ ಪ್ರತಿಭಟನಾ ನಿರತ ರೈತರು ರಾಷ್ಟ್ರವ್ಯಾಪಿ ಭಾರತ್ ಬಂದ್ಗೆ ಕರೆ ನೀಡಿವೆ.