ಪುಣೆ:ಒಡಿಶಾದ ಬಾಲಸೋರ್‌ನಲ್ಲಿ 288 ಜನರ ದಾರುಣ ಸಾವಿಗೆ ಕಾರಣವಾದ ತ್ರಿವಳಿ ರೈಲು ದುರಂತದ ಬಗ್ಗೆ ಉನ್ನತ ತನಿಖೆ ನಡೆಸಬೇಕು. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಶನಿವಾರ ಒತ್ತಾಯಿಸಿದ್ದಾರೆ.
ದುರಂತದ ನಂತರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂಬ ಕೂಗು ಹೆಚ್ಚಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, 1956 ರಲ್ಲಿ ನಡೆದ ರೈಲ್ವೆ ದುರಂತದಲ್ಲಿ ಸಾವು ನೋವಿನ ನೈತಿಕ ಹೊಣೆ ಹೊತ್ತು ಆಗಿನ ರೈಲ್ವೆ ಸಚಿವರಾಗಿದ್ದ ದಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಜೀನಾಮೆ ನೀಡಿದ ಉದಾಹರಣೆಯನ್ನು ಉಲ್ಲೇಖಿಸಿದರು. 'ಅಧಿಕಾರದಲ್ಲಿರುವವರು ದುರಂತ ಸಂಭವಿಸಿದ ವೇಳೆ ಹೊಣೆ ಹೊರಬೇಕು' ಎಂದು ಹೇಳಿದ್ದಾರೆ.
"ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ಅಪಘಾತ ಸಂಭವಿಸಿತ್ತು. ಇಂತಹ ಜವಾಬ್ದಾರಿಯುತ ನಿರ್ಣಯ ಕೈಗೊಂಡಾಗ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಶಾಸ್ತ್ರಿ ಅವರ ರಾಜೀನಾಮೆ ನಿರ್ಧಾರಕ್ಕೆ ವಿರುದ್ಧವಾಗಿದ್ದರು. ಆದರೆ, ಇದನ್ನು ಲೆಕ್ಕಿಸದೇ ನೈತಿಕ ಹೊಣೆಗಾರಿಕೆಗೆ ಕಟ್ಟು ಬಿದ್ದು ಶಾಸ್ತ್ರಿ ಅವರು ಹುದ್ದೆ ತೊರೆದು ಮಾದರಿಯಾದರು. ಇದು ರಾಷ್ಟ್ರವೇ ಮೆಚ್ಚುವ ಸಂಗತಿಯಾಗಿದೆ. ಅಧಿಕಾರದಲ್ಲಿರುವವರು ಇಂತಹ ಜವಾಬ್ದಾರಿತನದಿಂದ ವರ್ತಿಸಬೇಕು ಎಂದು ಪವಾರ್ ಹೇಳಿದರು.
ತ್ರಿವಳಿ ರೈಲು ದುರಂತ:ಜೂನ್ 2 ರಂದು (ಶುಕ್ರವಾರ) ಸಂಜೆ 7 ಗಂಟೆ ಸುಮಾರಿನಲ್ಲಿ ಒಡಿಶಾದ ಬನಹಗಾ ರೈಲು ನಿಲ್ದಾಣದ ಬಳಿ ಹೌರಾದಿಂದ ಚೆನ್ನೈಗೆ ಹೊರಟಿದ್ದ ಕೋರಮಂಡಲ್ ರೈಲು ಚಲಿಸುತ್ತಿದ್ದಾಗಲೇ ಹಳಿ ತಪ್ಪಿದೆ. ಇದರಿಂದ ಇನ್ನೊಂದು ಲೈನ್ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಗೂಡ್ಸ್ ಮತ್ತು ಕೋರಮಂಡಲ್ ರೈಲಿನ ಬೋಗಿಗಳು ಮತ್ತೊಂದು ಹಳಿಯ ಮೇಲೆ ಬಿದ್ದಿವೆ. ಅದೇ ಸಮಯಕ್ಕೆ ವಿರುದ್ಧ ದಿಕ್ಕಿನಿಂದ ಎಸ್‌ಎಂವಿಪಿ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಯಶವಂತಪುರದಿಂದ ಬಂದ ಹೌರಾ ಎಕ್ಸ್‌ಪ್ರೆಸ್ ಹಳಿ ಮೇಲೆ ಬಿದ್ದಿದ್ದ ಬೋಗಿಗಳಿಗೆ ವೇಗವಾಗಿ ಡಿಕ್ಕಿಯಾಗಿದೆ. ಇದರಿಂದ ಭೀಕರತೆ ಉಂಟಾಗಿದೆ. ಮೂರು ರೈಲುಗಳ ನಡುವಿನ ತಿಕ್ಕಾಟದಲ್ಲಿ ಈವರೆಗೆ 288 ಪ್ರಾಣ ಪಕ್ಷಿಗಳು ಹಾರಿ ಹೋಗಿವೆ.
ಈ ಹಿಂದೆ ಹೊಣೆಗಾರಿಕೆ ಮೆರೆದವರು:ಅವರ ಅಧಿಕಾರವಧಿಯಲ್ಲಿ ರೈಲು ದುರಂತ ನಡೆದ ವೇಳೆ ಹೊಣೆಗಾರಿಕೆ ಮೆರೆದು ರಾಜೀನಾಮೆ ನೀಡಿದ ಮತ್ತು ರಾಜೀನಾಮೆಗೆ ಮುಂದಾದ ಕೆಲ ನಾಯಕರು ಇತರರಿಗೆ ಮಾದರಿಯಾಗಿದ್ದಾರೆ. ಅಂಥವರಲ್ಲಿ ಮೊದಲಿಗರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ.