ಸತಾರಾ (ಮಹಾರಾಷ್ಟ್ರ): ಅಜಿತ್ ಪವಾರ್ ಅವರ ಬಂಡಾಯಕ್ಕೆ ತಮ್ಮ ಆಶೀರ್ವಾದ ಇದೆ ಎಂಬ ಊಹಾಪೋಹಗಳನ್ನು ಎನ್‌ಸಿಪಿ ವರಿಷ್ಠ ಶರದ್ ಪವಾರ್ ತಳ್ಳಿ ಹಾಕಿದ್ದಾರೆ. ಸೋಮವಾರ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಪಕ್ಷಾಂತರ ಮಾಡಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಪಕ್ಷ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಸತಾರಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎನ್‌ಸಿಪಿ ಬಲಪಡಿಸಲು ಮತ್ತು ಪಕ್ಷದ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಲು ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಿದ್ದಾರೆ. ಕೆಲವು ನಾಯಕರ ಕಾರ್ಯಗಳಿಂದ ನಾನು ವಿಚಲಿತನಾಗಿಲ್ಲ. ನಿನ್ನೆ ಶಿಂದೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಹಕ್ಕು ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರಿಗೆ ಇದೆ ಎಂದು ಪವಾರ್ ಇದೇ ವೇಳೆ, ದೃಢಪಡಿಸಿದ್ದಾರೆ.
ಅಜಿತ್ ಪವಾರ್ಗೆ ನನ್ನ ಬೆಂಬಲ ಇದೆ ಎನ್ನುವುದು ನೀಚತನ:ಭಾನುವಾರದ ಅಜಿತ್ ಪವಾರ್ ಅವರ ಬಂಡಾಯಕ್ಕೆ ಅವರ ಆಶೀರ್ವಾದವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎನ್‌ಸಿಪಿ ಮುಖ್ಯಸ್ಥ, "ಹೀಗೆ ಹೇಳುವುದು ಅತ್ಯಂತ ನೀಚತನಾಗುತ್ತದೆ. ಕೀಳು ಮತ್ತು ಕಡಿಮೆ ಬುದ್ಧಿಮತ್ತೆ ಇರುವವರು ಮಾತ್ರ ಇಂತಹ ಮಾತನಾಡಬಹುದು ಎಂದು ಗರಂ ಆದರು. "ನಾನು ರಾಜ್ಯ ಪ್ರವಾಸಕ್ಕೆ ಹೊರಟಿದ್ದೇನೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲು ಹೊರಟಿದ್ದೇನೆ, ಕೆಲವು ನಾಯಕರು ಮಾಡಿದ್ದಕ್ಕೆ ಪಕ್ಷದ ಮೂಲ ಕಾರ್ಯಕರ್ತರು ಭ್ರಮನಿರಸನಗೊಳ್ಳಬಾರದು" ಎಂಬ ಕಾರಣಕ್ಕೆ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದು ಶರದ್ ಪವಾರ್ ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಅಜಿತ್ ಪವಾರ್ ಶಿಬಿರದ ಅನೇಕರು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು, ಅಲ್ಲಿವರೆಗೂ ಕಾದು ನೋಡಿ ಎಂದು ಪವಾರ್ ಹೇಳಿದ್ದಾರೆ. ಭಾನುವಾರ, ಅಜಿತ್ ಪವಾರ್, ಎನ್‌ಸಿಪಿ ವಿಭಜಿಸಿ, ಶಿಂದೆ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ, ಎನ್‌ಸಿಪಿ ಎಂಟು ನಾಯಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಶರದ್ ಪವಾರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ.