ನವದೆಹಲಿ:ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಮತ್ತೊಮ್ಮೆ ಭೇಟಿ ಮಾಡಿದ್ದಾರೆ. ಈ ಹಿಂದೆ ಇಬ್ಬರೂ ಮುಂಬೈನ ಪವಾರ್ ನಿವಾಸದಲ್ಲಿ ಭೇಟಿಯಾಗಿದ್ದರು. ಈಗ ಇವರಿಬ್ಬರು ಮತ್ತೆ ಭೇಟಿಯಾದ ಕಾರಣ, ರಾಜಕೀಯ ವಲಯಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ಈ ಸಭೆಯನ್ನು ನೋಡಲಾಗುತ್ತಿದೆ.
ಈ ಮಧ್ಯೆ ಶರದ್ ಪವಾರ್ ಅವರು ನಾಳೆ ಸಂಜೆ 4 ಗಂಟೆಗೆ 15 ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಸಮಗ್ರ ಚರ್ಚೆ ನಡೆಯಲಿದೆ ಎಂದು ವರದಿಯಾಗಿದೆ. ಮನೀಶ್ ತಿವಾರಿ ಮತ್ತು ಶತ್ರುಘ್ನ ಸಿನ್ಹಾ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ.
ಖಾಸಗಿ ಕೆಲಸದಿಂದಾಗಿ ಅವರು ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಇನ್ನು ಶರದ್ ಪವಾರ್ ಜೂನ್ 23ರವರೆಗೆ ದೆಹಲಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶರದ್ ಪವಾರ್ ಅವರನ್ನು ಬಿಜೆಪಿ ವಿರೋಧಿ ಮೈತ್ರಿಕೂಟದ ಪ್ರಮುಖ ನಾಯಕರಾಗಿ ನೋಡಲಾಗುತ್ತಿದೆ.
2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ವಿರುದ್ಧ ದೊಡ್ಡ ವಿರೋಧ ಪಕ್ಷವನ್ನು ನಿರ್ಮಿಸುವ ಕಾರ್ಯತಂತ್ರದ ಕುರಿತು ಅವರು ಬಹಳ ಸಮಯದಿಂದ ಕೆಲಸ ಮಾಡುತ್ತಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಭರ್ಜರಿ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಅವರು ಎರಡು ಬಾರಿ ಭೇಟಿ ಮಾಡಿದ್ದಾರೆ. ಹಾಗಾದರೆ ಬಂಗಾಳ ಮಾದರಿಯನ್ನು ಈಗ ದೇಶದಲ್ಲಿ ಅಥವಾ ರಾಜ್ಯಗಳಲ್ಲಿ ಅನ್ವಯಿಸಬಹುದೇ? ಇದನ್ನು ಚರ್ಚಿಸಲಾಗುತ್ತಿದೆ.