ಮಧುಬನಿ (ಬಿಹಾರ) : ಆನ್ಲೈನ್ ಫ್ಯಾಂಟಸಿ ಪ್ಲಾಟ್ಫಾರ್ಮ್ ಡ್ರೀಮ್ 11ನಲ್ಲಿ ರಾಜ್ಯದ ಮಧುಬನಿ ಜಿಲ್ಲೆಯ ಯುವಕ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಬ್ಯಾಷ್ ವಿನ್ನಿಂಗ್ ಸ್ಪರ್ಧೆಯಲ್ಲಿ ಇವರು ರಚಿಸಿದ ತಂಡ ಯಶಸ್ವಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ ಬದುಕು ಬದಲಿಸಿದೆ. ಕೋಟಿ ಗೆದ್ದ ಯುವಕನ ಹೆಸರು ಶಾನು ಕುಮಾರ್ (19 ವರ್ಷ). ಈತ ಕಿರಾಣಿ ಉದ್ಯಮಿ ರಾಜೇಶ್ ಮೆಹ್ತಾ ಎಂಬವರ ಪುತ್ರ.
ಶಾನು ಕುಮಾರ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ದೆಹಲಿಯಲ್ಲಿ ಉಳಿದುಕೊಂಡಿರುವ ಈತ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಅಕಾಡೆಮಿಯಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಿದ್ದಾನೆ. "ನನಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ. ನನ್ನ ಮೊಬೈಲ್‌ಗೆ ಬಂದ ಮೆಸೇಜ್ ನೋಡಿ ಸಂತೋಷಕ್ಕೆ ಮಿತಿಯೇ ಇಲ್ಲದಂತಾಗಿತ್ತು. ಕ್ರಿಕೆಟಿಗನಾಗುವ ಆಸೆ ಇದೆ. ಈಗ ಬಂದಿರುವ ಹಣವನ್ನು ತಂದೆಗೆ ನೀಡಿದ್ದೇನೆ. ಇದರಿಂದ ಅವರ ವ್ಯಾಪಾರಕ್ಕೆ ಅನುಕೂಲವಾಗಲಿದೆ. ನಾನು ಉತ್ತಮ ಕ್ರಿಕೆಟ್ ತರಬೇತಿ ಪಡೆದುಕೋಳ್ಳುತ್ತೇನೆ" ಎಂದು ಶಾನು ಕುಮಾರ್ ಖುಷಿ ಹಂಚಿಕೊಂಡರು.