ಕಾಂಚೀಪುರಂ (ತಮಿಳುನಾಡು):ಜನವರಿ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ನಡೆಯವ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನಾಲ್ಕು ಪೀಠಗಳ ಶಂಕರಾಚಾರ್ಯರು ಗೈರಾಗಲಿದ್ದಾರೆ ಎಂಬ ಮಾಹಿತಿಯ ನಡುವೆ, ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕಂಚಿ ಕಾಮಕೋಟಿ ಮಠವು, ಮಂದಿರ ಉದ್ಘಾಟನೆ ನಿಮಿತ್ತ ಯಜ್ಞಶಾಲೆಯಲ್ಲಿ 40 ದಿನಗಳ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಘೋಷಿಸಿದೆ.
"ಶ್ರೀರಾಮನ ಕೃಪೆಯೊಂದಿಗೆ ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಜನವರಿ 22 ರಂದು ನಡೆಯಲಿದೆ. ಕಾಶಿ ಮಠದ ಯಜ್ಞಶಾಲೆಯಲ್ಲಿ 40 ದಿನಗಳ ಕಾಲ ವಿಶೇಷ ಪೂಜೆಯನ್ನು ನಡೆಸಲಾಗುತ್ತಿದೆ. ಇದು ಮಂದಿರ ಉದ್ಘಾಟನೆ ಕಾರ್ಯಕ್ರಮದ ಭಾಗವಾಗಿದೆ. ಲಕ್ಷ್ಮೀಕಾಂತ ದೀಕ್ಷಿತ್ ಸೇರಿದಂತೆ ವೈದಿಕ ವಿದ್ವಾಂಸರ ನೇತೃತ್ವದಲ್ಲಿ ಈ ಪೂಜೆ ನಡೆಯಲಿದೆ" ಎಂದು ಕಂಚಿ ಕಾಮಕೋಟಿ ಮಠದ ಶಂಕರಾಚಾರ್ಯರು ಹೇಳಿದ್ದಾರೆ. ಈ ಮೂಲಕ ಮಂದಿರ ಉದ್ಘಾಟನೆಗೆ ತಮ್ಮ ವಿರೋಧವಿಲ್ಲ ಎಂಬುದನ್ನು ಸೂಚಿಸಿದ್ದಾರೆ.
100ಕ್ಕೂ ಹೆಚ್ಚು ವಿದ್ವಾಂಸರು ಪೂಜೆ, ಹವನ ನಡೆಸಲಿದ್ದಾರೆ. ಪೀಠದ ಯಜ್ಞಶಾಲೆಯಲ್ಲಿ ಜಪ-ತಪಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಯಾತ್ರಾ ಸ್ಥಳಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕೇದಾರನಾಥ ಮತ್ತು ಕಾಶಿ ವಿಶ್ವನಾಥ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲಾಗಿದೆ ಎಂದು ಶಂಕರಾಚಾರ್ಯರು ಹೇಳಿದ್ದಾರೆ.