ಜೋಧಪುರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಹಿರಿಯ ಮಗಳು ಶನೆಲ್ ಅವರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಬುಧವಾರ ಬೆಳಗ್ಗೆ ಜೋಧ್‌ಪುರ ತಲುಪಿದ್ದಾರೆ. ಇಲ್ಲಿಂದ ನೇರವಾಗಿ ಖಿನ್ವಸರ್ ಗೆ ಪ್ರಯಾಣ ಬೆಳೆಸಿದ್ದಾರೆ. ಮಾಜಿ ಸಚಿವ ಗಜೇಂದ್ರ ಸಿಂಗ್ ವಿಮಾನ ನಿಲ್ದಾಣಕ್ಕೆ ತೆರಳಿ ಸ್ಮೃತಿ ಇರಾನಿ ಅವರನ್ನು ಬರಮಾಡಿಕೊಂಡರು ಮತ್ತು ಅವರೊಂದಿಗೆ ಖಿನ್ವಸರ್‌ಗೆ ತೆರಳಿದರು. ಮಾಜಿ ಸಚಿವ ಗಜೇಂದ್ರ ಸಿಂಗ್ ಅವರೇ ಈ ಮದುವೆ ಸಮಾರಂಭದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿವಾಹ ಖಿನ್ವಸರ್ ಕೋಟೆಯಲ್ಲಿ ನಡೆಯಲಿದೆ. ಈ ಕೋಟೆ 500 ವರ್ಷಗಳಷ್ಟು ಹಳೆಯದು. ಈ ಕೋಟೆಯ ಮೇಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡೂ ದೃಶ್ಯಗಳು ಅದ್ಭುತವಾಗಿ ಕಾಣಿಸುತ್ತವೆ ಎಂದು ಹೇಳಲಾಗುತ್ತದೆ. ಮುಂದಿನ ಎರಡು ದಿನಗಳ ಕಾಲ (ಇಂದು ಮತ್ತು ನಾಳೆ) ಈ ಐತಿಹಾಸಿಕ ಕೋಟೆಯಲ್ಲಿ 50 ಕ್ಕೂ ಹೆಚ್ಚು ವಿವಿಐಪಿ ಅತಿಥಿಗಳು ಜಮಾಯಿಸಲಿದ್ದಾರೆ. ಇದರಲ್ಲಿ ಹಲವು ರಾಜಕೀಯ ವ್ಯಕ್ತಿಗಳೂ ಭಾಗಿಯಾಗಲಿದ್ದಾರೆ. ಇಂದಿನಿಂದ ಮದುವೆ ಕಾರ್ಯಕ್ರಮಗಳು ಆರಂಭವಾಗಲಿವೆ.