ಢಾಕಾ/ಕೋಲ್ಕತ್ತಾ: ಬಾಂಗ್ಲಾದೇಶದ ಕ್ರಿಕೆಟ್ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರಿಗೆ ಫೇಸ್‌ಬುಕ್ ಲೈವ್‌ನಲ್ಲಿ ಮೂಲಭೂತವಾದಿವೋರ್ವ ಕೊಲೆ ಬೆದರಿಕೆ ಹಾಕಿ ಧರ್ಮನಿಂದನೆ ಮಾಡಿದ್ದಾನೆ.
ಇಲ್ಲಿನ ಸಿಲ್ಹೆಟ್‌ನ ಶಹಪುರ್ ತಾಲೂಕಿನ ನಿವಾಸಿ ಮೊಹ್ಸಿನ್ ತಾಲ್ಲೂಕ್ದರ್ ಬೆದರಿಕೆವೊಡ್ಡಿರುವ ಆರೋಪಿ, ಈತ ಕಳೆದ ಭಾನುವಾರ ಮಧ್ಯಾಹ್ನ 12.06ಕ್ಕೆ ಫೇಸ್‌ಬುಕ್ ಲೈವ್ ಪ್ರಾರಂಭಿಸಿ ಅದರಲ್ಲಿ ಶಕೀಬ್ ಅವರ ವರ್ತನೆ ಕುರಿತು ಬೇಸರ ವ್ಯಕ್ತಪಡಿಸಿ, ಕೊಲೆ ಬೆದರಿಕೆ ಹಾಕಿದ್ದ.
ಬೇಲೆಘಾಟಾ ಪ್ರದೇಶದಲ್ಲಿ ಕಾಳಿ ಪೂಜೆ ಉದ್ಘಾಟಿಸಲು ಶಕೀಬ್ ಕಳೆದ ಗುರುವಾರ ಪೆಟ್ರಾಪೋಲ್ ಗಡಿಯ ಮೂಲಕ ಕೋಲ್ಕತ್ತಾಗೆ ತೆರಳಿದ್ದರು. ಪೂಜೆ ವೇಳೆ ವಿಗ್ರಹದ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಪ್ರಾರ್ಥಿಸಿದ್ದಾರೆ. ಈ ವರ್ತನೆ 'ಮುಸ್ಲಿಮರನ್ನು ನೋಯಿಸಿದೆ' ಎಂದು ಮೊಹ್ಸಿನ್ ತಾಲ್ಲೂಕ್ದರ್ ಹೇಳಿಕೊಂಡಿದ್ದಾನೆ.
ಹೀಗಾಗಿ ಶಕೀಬ್‌ನನ್ನು ಕತ್ತಿಯಿಂದ ತುಂಡುಗಳಾಗಿ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಗತ್ಯವಿದ್ದರೆ ಶಕೀಬ್‌ನನ್ನು ಕೊಲ್ಲಲು ತಾನು ಸಿಲ್ಹೆಟ್‌ನಿಂದ ಕಾಲ್ನಡಿಗೆಯಲ್ಲಿ ಬರುವುದಾಗಿ ಹೇಳಿದ್ದಾನೆ.
ಘಟನೆ ಸಂಬಂಧ ಸಿಲ್ಹೆಟ್ ಮೆಟ್ರೋಪಾಲಿಟನ್ ಪೊಲೀಸ್ ಹೆಚ್ಚುವರಿ ಉಪ ಆಯುಕ್ತ ಬಿ.ಎಂ. ಅಶ್ರಫ್ ಉಲ್ಲಾ ತಾಹರ್ ಪ್ರತಿಕ್ರಿಯಿಸಿ, ನಾವು ಈ ವಿಷಯದ ಬಗ್ಗೆ ಮಾಹಿತಿ ಕಲೆಹಾಕಿದ್ದೇವೆ. ವಿಡಿಯೋ ಲಿಂಕ್ ಅನ್ನು ಸೈಬರ್ ಫೋರೆನ್ಸಿಕ್ ತಂಡಕ್ಕೆ ಹಸ್ತಾಂತರಿಸಲಾಗಿದೆ. ಶೀಘ್ರದಲ್ಲೇ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.