ನವದೆಹಲಿ:ನೂತನ ಸಂಸತ್ ಭವನ ಉದ್ಘಾಟನೆಯ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್ಸ್ಟಾರ್ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿ, "ನೂತನ ಸಂಸತ್ ಕಟ್ಟಡವು ನವ ಭಾರತಕ್ಕೆ ಕೊಡುಗೆ. ದೇಶದ ಬೆಳವಣಿಗೆಯ ಸಂಕೇತ" ಎಂದು ಟ್ವಿಟರ್ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಇಬ್ಬರು ನಟರನ್ನು ಶ್ಲಾಘಿಸಿದ್ದಾರೆ.
ಟ್ವೀಟ್ ಮಾಡಿರುವ ಶಾರುಖ್ ಖಾನ್, "ನಮ್ಮ ಸಂವಿಧಾನವನ್ನು ಎತ್ತಿ ಹಿಡಿಯುವ, ಮಹಾನ್ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯನ್ನೂ ಪ್ರತಿನಿಧಿಸುವ ಮತ್ತು ವೈವಿಧ್ಯತೆಯನ್ನು ಕಾಪಾಡುವ ಜನರಿಗೆ ಭವ್ಯವಾದ ಹೊಸ ಮನೆಯಾಗಿದೆ. ಪ್ರಧಾನಿ ಮೋದೀಜಿ ಹೊಸ ಭಾರತಕ್ಕಾಗಿ ಹೊಸ ಸಂಸತ್ತು ನಿರ್ಮಿಸಿದ್ದಾರೆ. ಭಾರತದ ವೈಭವ, ನಮ್ಮ ರಾಷ್ಟ್ರ ಜೈ ಹಿಂದ್. ನನ್ನ ಸಂಸತ್ ನನ್ನ ಹೆಮ್ಮೆ ಎಂಬ ಹ್ಯಾಷ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ವಿಶೇಷವೆಂದರೆ ಈ ವಿಡಿಯೋಗೆ ಶಾರುಖ್ ತಮ್ಮದೇ ಧ್ವನಿ ನೀಡಿದ್ದಾರೆ.
"ಪ್ರಜಾಪ್ರಭುತ್ವದ ಆತ್ಮವು ತನ್ನ ಹೊಸ ಮನೆಯಲ್ಲಿ ದೃಢವಾಗಿ ಉಳಿಯಲಿ. ಮುಂದಿನ ಯುಗಗಳವರೆಗೆ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಯನ್ನು ಪೋಷಿಸಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವದ ಈ ಹೊಸ ಸ್ಥಾನವು ತನ್ನ ವೈಜ್ಞಾನಿಕ ಮನೋಭಾವ ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿ ಹೊಸ ಯುಗವನ್ನು ನಿರ್ಮಿಸಲಿ" ಎಂದು ನೂತನ ಸಂಸತ್ ಬಗ್ಗೆ ಶಾರುಖ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, "ಸುಂದರವಾಗಿ ಭಾವನೆ ವ್ಯಕ್ತಪಡಿಸಿದ್ದೀರಿ. ಹೊಸ ಸಂಸತ್ ಭವನವು ಪ್ರಜಾಪ್ರಭುತ್ವದ ಶಕ್ತಿ ಮತ್ತು ಪ್ರಗತಿಯ ಸಂಕೇತವಾಗಿದೆ. ಇದು ಸಂಪ್ರದಾಯವನ್ನು ಅಧುನಿಕತೆಯೊಂದಿಗೆ ಸಂಯೋಜಿಸುತ್ತದೆ" ಎಂದು ಶಾರುಖ್ ಖಾನ್ ಅವರನ್ನು ಶ್ಲಾಘಿಸಿದ್ದಾರೆ. ಇದೇ ರೀತಿ ನಟ ಅಕ್ಷಯ್ ಕುಮಾರ್ ಅವರು ಟ್ವಿಟರ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, "ಸಂಸತ್ತಿನ ಈ ವೈಭವದ ಹೊಸ ಕಟ್ಟಡವನ್ನು ನೋಡಲು ಹೆಮ್ಮೆ ಪಡುತ್ತೇನೆ. ಇದು ಭಾರತದ ಬೆಳವಣಿಗೆಯ ಕಥೆಯ ಪ್ರತೀಕವಾಗಲಿ" ಎಂದು ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ:ನೂತನ ಸಂಸತ್ ಭವನದತ್ತ ಹೊರಟ ಕುಸ್ತಿಪಟುಗಳ ಬಂಧನ: ಪೊಲೀಸರಿಂದ ಪ್ರತಿಭಟನಾ ಸ್ಥಳ ತೆರವು
ಅಕ್ಷಯ್ ಅವರ ಪೋಸ್ಟ್ಗೆ ಉತ್ತರಿಸಿದ ಪ್ರಧಾನಿ, "ಹೊಸ ಸಂಸತ್ತು ನಿಜವಾಗಿಯೂ ನಮ್ಮ ಪ್ರಜಾಪ್ರಭುತ್ವದ ದಾರಿದೀಪವಾಗಿದೆ. ಇದು ರಾಷ್ಟ್ರದ ಶ್ರೀಮಂತ ಪರಂಪರೆ ಮತ್ತು ಭವಿಷ್ಯದ ರೋಮಾಂಚಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ನನ್ನ ಪಾರ್ಲಿಮೆಂಟ್ ನನ್ನ ಹೆಮ್ಮೆ" ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಇಂದು (ಭಾನುವಾರ) ಬೆಳಗ್ಗೆ ನೂತನ ಸಂಸತ್ ಭವನ ಉದ್ಘಾಟಿಸಿದರು. ಲೋಕಸಭೆಯ ಸಭಾಂಗಣದಲ್ಲಿ ಐತಿಹಾಸಿಕ ಸೆಂಗೋಲ್ ಸ್ಥಾಪಿಸಿದರು. ಐತಿಹಾಸಿಕ ಕಾರ್ಯಕ್ರಮಕ್ಕೆ 20 ಕ್ಕೂ ಹೆಚ್ಚು ವಿರೋಧ ಪಕ್ಷಗಳು ಗೈರು ಹಾಜರಾಗಿದ್ದವು. ಇನ್ನೊಂದೆಡೆ, ಆರ್‌ಜೆಡಿ ಕಟುಟೀಕೆ ಮಾಡಿದ್ದು ಹೊಸ ಸಂಸತ್ ಕಟ್ಟಡ ಶವ ಪೆಟ್ಟಿಗೆಯಂತಿದೆ ಎಂದು ಅಣಕವಾಡಿದೆ.
ಇದನ್ನೂ ಓದಿ:10 ಲಕ್ಷ ಗಂಟೆ ಕೆಲಸ ಮಾಡಿ ಹೊಸ ಸಂಸತ್ ಭವನಕ್ಕೆ ಆಕರ್ಷಕ ಕಾರ್ಪೆಟ್ ನೇಯ್ದ 900 ಕುಶಲಕರ್ಮಿಗಳು!