ಲಖನೌ(ಉತ್ತರ ಪ್ರದೇಶ):ಗುಟ್ಕಾ ಕಂಪನಿಗಳಿಗೆ ಜಾಹೀರಾತು ಸಂಬಂಧ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು ಅಲಹಾಬಾದ್ ನ್ಯಾಯಾಲಯದ ಲಖನೌ ಪೀಠಕ್ಕೆ ಮಾಹಿತಿ ನೀಡಿತು.
ಸುಪ್ರೀಂ ಕೋರ್ಟ್‌ನಲ್ಲೂ ಇದೇ ವಿಷಯದ ವಿಚಾರಣೆ ನಡೆಯುತ್ತಿದ್ದು, ತ್ವರಿತ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರದ ವಕೀಲರು ಶುಕ್ರವಾರ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಮನವಿ ಆಲಿಸಿದ ನಂತರ ಪೀಠ ವಿಚಾರಣೆಯನ್ನು ಮೇ 9, 2024ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ:ಸಿಗರೇಟ್, ಗುಟ್ಕಾ ಬೆಲೆ ದುಬಾರಿಯಾದ್ರೂ ಉಗುಳೋರು, ಹೊಗೆ ಬಿಡೋರು ಕಡಿಮೆಯಿಲ್ಲ..
ಗುಟ್ಕಾ ಕಂಪನಿಗಳ ಜಾಹೀರಾತಿನಲ್ಲಿ ಪಾಲ್ಗೊಂಡಿರುವ ನಟರು ಮತ್ತು ಗಣ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿರುವ ಅರ್ಜಿದಾರರ ಪ್ರಾತಿನಿಧ್ಯವನ್ನು ನಿರ್ಧರಿಸುವಂತೆ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರಿದ್ದ ಪೀಠವು ಈ ಹಿಂದೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅಕ್ಟೋಬರ್ 22ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು. ಆ ಬಳಿಕ, ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿತ್ತು. ಶುಕ್ರವಾರ ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್.ಬಿ. ಪಾಂಡೆ ಅವರು ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಶೋಕಾಸ್ ನೋಟಿಸ್ ಜಾರಿ ಮಾಡಿದೆ ಎಂದು ಹೈಕೋರ್ಟ್‌ಗೆ ತಿಳಿಸಿದರು.
ಇದನ್ನೂ ಓದಿ:ಗುಟ್ಕಾ, ತಂಬಾಕು ಉತ್ಪನ್ನಗಳ ಮೇಲೆ ನಿಷೇಧ : ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಇನ್ನೊಂದೆಡೆ, ಅಮಿತಾಬ್ ಬಚ್ಚನ್ ಅವರು ಗುಟ್ಕಾ ಕಂಪನಿಯೊಂದಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಅವರು ಈಗಾಗಲೇ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದ್ದರೂ ಸಹ ಅವರ ಜಾಹೀರಾತು ತೋರಿಸಲಾಗುತ್ತಿದೆ. ಹೈಕೋರ್ಟ್ನ ಲಖನೌ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು 2024ಕ್ಕೆ ನಿಗದಿಪಡಿಸಿದೆ.
ಇದನ್ನೂ ಓದಿ:ಗುಟ್ಕಾ ತಿಂದು ಮನೆ ಗೋಡೆಗೆ ಉಗುಳಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರ ಬಂಧನ!