ಶ್ರೀನಗರ(ಜಮ್ಮುಕಾಶ್ಮೀರ):ಕಣಿವೆ ರಾಜ್ಯದ ಯುವಕರು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಕೊಟ್ಟಿದ್ದಾರೆ. ಜಮ್ಮು-ಕಾಶ್ಮೀರದ ಮೂರು ದಿನದ ಪ್ರವಾಸದಲ್ಲಿರುವ ಅವರು ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಜಮ್ಮುವಿನ ಭಗವತಿ ನಗರದಲ್ಲಿ ಮಾತನಾಡಿದ ಅವರು, ಈ ಪ್ರದೇಶದ ಜನರಿಗೆ ಅನ್ಯಾಯ ಮಾಡಲಾಗುತ್ತಿದ್ದ ಯುಗ ಕೊನೆಗೊಂಡಿದೆ. ಜಮ್ಮುವಿನ ಜನರನ್ನು ಬದಿಗೊತ್ತುವ ಸಮಯ ಮುಗಿದಿದೆ. ಕೆಲ ಜನರು ಇಲ್ಲಿನ ಅಭಿವೃದ್ಧಿಗೆ ಅಡ್ಡಿಪಡಿಸಲು ಯತ್ನಿಸುತ್ತಿದ್ದಾರೆ. ಆದರೆ, ಎಂದಿಗೂ ಅದು ಸಾಧ್ಯವಾಗಲು ಬಿಡುವುದಿಲ್ಲ. ಕಾಶ್ಮೀರ ಮತ್ತು ಜಮ್ಮು ಎರಡನ್ನೂ ಒಟ್ಟಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಶಾ ಭರವಸೆ ನೀಡಿದರು.
ಯುವಕರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡರೆ ಭಯೋತ್ಪಾದಕರನ್ನು ಮಟ್ಟಹಾಕಬಹುದು. ಈ ಹಿಂದೆ ಕೆಲವರು(ವಿಪಕ್ಷಗಳು) ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ತರುವ ಪರಿಕಲ್ಪನೆಯನ್ನು ಅಪಹಾಸ್ಯ ಮಾಡಿದರು. ನಾವು ಹೊಸ ಕೈಗಾರಿಕಾ ನೀತಿಯನ್ನು ಪರಿಚಯಿಸಿದಾಗ ಎಲ್ಲರೂ ಅಣಕಿಸಿದರು. ಆದರೆ, ಪ್ರಧಾನಿ ಮೋದಿಯವರ ಸಾಧನೆಯಿಂದಾಗಿ ಈಗಾಗಲೇ 12 ಸಾವಿರ ಕೋಟಿ ರೂ. ಹೂಡಿಕೆಯಾಗಿದೆ. 2022 ರ ವೇಳೆಗೆ 51 ಸಾವಿರ ಕೋಟಿ ರೂ.ಹೂಡಿಕೆಯಾಗುವ ಸಾಧ್ಯತೆಯಿದೆ ಎಂದರು.