ನವದೆಹಲಿ:ದೆಹಲಿಯ ಶಹಬಾದ್ ಡೈರಿಯಲ್ಲಿ 16 ವರ್ಷದ ಬಾಲಕಿಯನ್ನು ಬರ್ಬರವಾಗಿ ಇರಿದು ಕೊಂದ ಆರೋಪಿ, ರಾತ್ರೋರಾತ್ರಿ ನಗರದಿಂದ ತಪ್ಪಿಸಿಕೊಂಡು 2 ಬಸ್ ಬದಲಿಸಿ ಉತ್ತರ ಪ್ರದೇಶದ ಬುಲಂದ್‌ಶಹರ್‌ಗೆ ತಲುಪಿದ್ದ. ಪ್ರೇಯಸಿಯ ಕೊಂದ ಬಗ್ಗೆ ತನಗೆ ಯಾವುದೇ ಭಯ, ವಿಷಾದವಿಲ್ಲ ಎಂದು ತನಿಖೆಯ ವೇಳೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಹಂತಕನಾದ 20 ವರ್ಷದ ಸಾಹಿಲ್ ಖಾನ್, ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಎಸಿ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಬಾಲಕಿಯನ್ನು ರಸ್ತೆ ಮೇಲೆಯೇ ಕೊಚ್ಚಿದ್ದಲ್ಲದೇ, ಸಿಮೆಂಟ್ ಚಪ್ಪಡಿಯಿಂದ ಜಜ್ಜಿ ಕೊಲೆ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಕೊಲೆಯಾದ ಬಾಲಕಿಯ ಜೊತೆಗೆ ತನಗೆ 3 ವರ್ಷಗಳ ಪರಿಚಯವಿತ್ತು. ತನ್ನನ್ನು ಪ್ರೀತಿಸುತ್ತಿದ್ದ ಈಕೆ ಇತ್ತೀಚೆಗೆ ದೂರವಾಗಲು ಪ್ರಯತ್ನಿಸಿದ್ದಳು. ಹುಡುಗಿ ತನ್ನನ್ನು ನಿರ್ಲಕ್ಷಿಸುತ್ತಿದ್ದರಿಂದ ತಾನು ಕೋಪಗೊಂಡಿದ್ದೆ. ಅಲ್ಲದೇ, ಬೇರೊಬ್ಬನ ಜೊತೆಗೆ ಸಂಪರ್ಕ ಹೊಂದಿದ್ದಳು. ಈ ವಿಷಯವಾಗಿ ಹಲವಾರು ಬಾರಿ ಕಿತ್ತಾಡಿಕೊಂಡಿದ್ದೇವೆ. ಇದು ವಿಕೋಪಕ್ಕೆ ತಿರುಗಿ ನಿನ್ನೆ ಕೊಲೆ ಮಾಡಿದೆ ಎಂದು ಸಾಹಿಲ್ ಪೊಲೀಸರೆದುರು ಒಪ್ಪಿಕೊಂಡಿದ್ದಾನೆ. ತಾನು ಕೊಲೆ ಮಾಡಿದ್ದರ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದೂ ತಿಳಿಸಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
2 ಬಸ್ ಬದಲಿಸಿ ಪರಾರಿ:ಭೀಕರವಾಗಿ ಕೊಲೆ ಮಾಡಿದ ಬಳಿಕ ಸಾಹಿಲ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದ. ಉತ್ತರ ಪ್ರದೇಶದ ಬುಲಂದ್ಶಹರ್ ತಲುಪಲು ಎರಡು ಬಸ್‌ಗಳನ್ನು ಬದಲಾಯಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊದಲು ಆತ ರಿಥಾಲಾಗೆ ತೆರಳಿದ್ದ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಎಸೆದಿದ್ದಾನೆ. ಬಳಿಕ ಬುಲಂದ್‌ಶಹರ್‌ಗೆ ಪರಾರಿಯಾಗಿದ್ದ. ಪ್ರಯಾಣದ ವೇಳೆ ಎರಡು ಬಸ್‌ಗಳನ್ನು ಬದಲಾಯಿಸಿದ್ದ. ಬಳಿಕ ಅಲ್ಲಿನ ತನ್ನ ಚಿಕ್ಕಮ್ಮನ ನಿವಾಸದಲ್ಲಿ ಅಡಗಿಕೊಂಡಿದ್ದ. ಸಾಹಿಲ್‌ನ ದಿಢೀರ್ ಆಗಮನ ಕಂಡು ಚಿಕ್ಕಮ್ಮ, ಆತನ ತಂದೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆರೋಪಿ ಬುಲಂದ್‌ಶಹರ್‌ನಲ್ಲಿ ಇರುವುದು ಗೊತ್ತಾಗಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.