ರಾಯ್ಪುರ(ಛತ್ತೀಸ್ಗಢ):ಗಂಡ-ಹೆಂಡತಿಯ(ವೈವಾಹಿಕ) ಮೇಲೆ ನಡೆಸುವ ಅತ್ಯಾಚಾರವನ್ನು ಭಾರತೀಯ ಕಾನೂನಿನಲ್ಲಿ ಅಪರಾಧವೆಂದು ಪರಿಗಣಿಸಲಾಗಿಲ್ಲ. ಲೈಂಗಿಕ ಕ್ರಿಯೆಯು ಬಲವಂತದಿಂದಾದರೂ ಸರಿ ಅಥವಾ ಆಕೆ ಒಪ್ಪಿಗೆಯಿದ್ದರೂ ಸರಿ ಅದು ಅಪರಾಧವಲ್ಲ ಎಂದು ಛತ್ತೀಸ್ಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭಾರತೀಯ ದಂಡ ಸಂಹಿತೆ(ಐಪಿಸಿ ಸೆಕ್ಷನ್) 375 ರ (ಅತ್ಯಾಚಾರವು ಅಪರಾಧ) 2 ನೇ ಭಾಗವು ವ್ಯಕ್ತಿಯು ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಲ್ಲ ಎಂದು ನ್ಯಾಯಮೂರ್ತಿ ಎನ್.ಕೆ. ಚಂದ್ರವಂಶಿ ಹೇಳಿದ್ದಾರೆ. ಈ ನಿಯಮವು ತನ್ನ ಸ್ವಂತ ಪತ್ನಿಯೊಂದಿಗೆ(ಅಪ್ರಾಪ್ತಳಲ್ಲದ) ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರವಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಮಹಿಳೆಯೊಬ್ಬಳು, ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಪತಿ ವಿರುದ್ಧ ಸೆಕ್ಷನ್ 376(ಅತ್ಯಾಚಾರ) ಅಡಿ ಹಲವು ಆರೋಪಗಳನ್ನು ಮಾಡಿ ಕೋರ್ಟ್ ಮೆಟ್ಟಿಲೇರಿದ್ದಳು. ವಿಚಾರಣೆ ನಡೆಸಿದ ನ್ಯಾಯಾಲಯ ಆತನನ್ನು ನಿರಪರಾಧಿ ಎಂದು ರಿಲೀಸ್ ಮಾಡಿತ್ತು.
ಆದರೂ, ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಮಹಿಳೆ ಸೆಕ್ಷನ್ 498 ಎ (ಮಹಿಳೆಯರಿಗೆ ಕ್ರೌರ್ಯಕ್ಕೆ ಸಂಬಂಧಿಸಿ), 377 (ಅಸಹಜ ಸಂಭೋಗ)ದಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಮದುವೆಯಾದ ಕೆಲ ದಿನಗಳ ಬಳಿಕ ಪತಿಯ ಕುಟುಂಬಸ್ಥರು ಕ್ರೌರ್ಯ, ನಿಂದನೆ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯು ಆರೋಪಿಸಿದ್ದಾಳೆ. ಅಲ್ಲದೆ, ಆತ ಸಂಭೋಗದ ವೇಳೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನು ಎಂದು ಆರೋಪಿಸಿದ್ದಾಳೆ.
ವ್ಯಕ್ತಿಯು ಮಹಿಳೆಯ ಯೋನಿಯಲ್ಲಿ ಇತರೆ ವಸ್ತುಗಳನ್ನಿಟ್ಟು ಸುಖ ಪಡುತ್ತಿದ್ದನು ಎನ್ನಲಾಗ್ತಿದೆ. ಇಂಥ ಕ್ರಿಯೆಯು ವ್ಯಕ್ತಿಯ ವಿಕೃತ ಮನೋಭಾವ ತೋರಿಸುತ್ತದೆ. ವ್ಯಕ್ತಿಯ ದುರ್ವರ್ತನೆಯು ಐಪಿಸಿ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಾಗುತ್ತದೆ. ಈ ಸಂಬಂಧ ನ್ಯಾಯಾಲಯವು ಸಂತ್ರಸ್ತೆಯಿಂದ ಲಿಖಿತ ಹೇಳಿಕೆ ಪಡೆದಿದೆ.
ಇತ್ತೀಚೆಗಷ್ಟೇ, ವೈವಾಹಿಕ ಅತ್ಯಾಚಾರವು ಭಾರತೀಯ ಕಾನೂನಿನ ಪ್ರಕಾರ ಕ್ರಿಮಿನಲ್ ಅಪರಾಧವಲ್ಲ, ಅದು ಕ್ರೌರ್ಯಕ್ಕೆ ಸಮಾನವಾಗಿದ್ದು. ಹೆಂಡತಿ ವಿಚ್ಛೇಧನಕ್ಕೆ ಅರ್ಹಳು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.