ವಾರಾಣಸಿ: ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿಯೊಬ್ಬಳಿಗೆ ಮೂವರು ಅಪರಿಚಿತ ವ್ಯಕ್ತಿಗಳು ಕಿರುಕುಳ ನೀಡಿ ಬಲವಂತವಾಗಿ ಚುಂಬಿಸಿದ್ದು, ಮಾತ್ರವಲ್ಲದೇ ಆಕೆಯನ್ನು ವಿವಸ್ತ್ರಗೊಳಿಸಿ ವಿಡಿಯೋ ಮಾಡಿರುವ ಘಟನೆ ನಡೆದಿದೆ. ಇದನ್ನು ವಿರೋಧಿಸಿ, ಬಿಎಚ್ಯು ಆವರಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಗುರುವಾರ ಬೆಳಗ್ಗೆ ಸಂಸ್ಥೆಯ ನಿರ್ದೇಶಕರ ಕಚೇರಿ ಎದುರು ಸಾವಿರಾರು ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಕ್ಯಾಂಪಸ್ನಲ್ಲಿ ಉತ್ತಮ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿ ಎಫ್ಐಆರ್ನಲ್ಲಿ, "ಬುಧವಾರ ಮಧ್ಯರಾತ್ರಿ 1.30ರ ಹೊತ್ತಿಗೆ ನಾನು ವಾಕಿಂಗ್ ಹೊರಟಿದ್ದು, ಗಾಂಧಿ ಸ್ಮೃತಿ ಹಾಸ್ಟೆಲ್ ಡಿವೈಡರ್ ಬಳಿ ಗೆಳೆಯನನ್ನು ಭೇಟಿಯಾಗಿದ್ದೆ. ಅಲ್ಲಿಂದ ಇಬ್ಬರು ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದೆವು. ನಾವು ಕರ್ಮನ್ ಬಾಬಾ ದೇವಸ್ಥಾನದಿಂದ 300-400 ಮೀಟರ್ ದೂರದಲ್ಲಿದ್ದಾಗ ಹಿಂದಿನಿಂದ ಮೂವರು ಅಪರಿಚಿತರು ಬೈಕ್ನಲ್ಲಿ ಬಂದರು. ಅವರು ನನ್ನ ಬಾಯಿಯನ್ನು ಬಿಗಿಯಾಗಿ ಮುಚ್ಚಿ ನನ್ನನ್ನು ಹತ್ತಿರದ ಒಂದು ಸ್ಥಳಕ್ಕೆ ಕರೆದೊಯ್ದು ಬಲವಂತವಾಗಿ ಚುಂಬಿಸಿದರು. ಮಾತ್ರವಲ್ಲದೇ ನನ್ನನ್ನು ವಿವಸ್ತ್ರಗೊಳಿಸಿ, ಫೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿದ್ದಾರೆ. ಸಹಾಯಕ್ಕಾಗಿ ಕಿರುಚಿಕೊಂಡಾಗ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಬೈಕ್ ಸವಾರರು ನನ್ನನ್ನು ಸುಮಾರು 10-15 ನಿಮಿಷಗಳ ನಂತರ ಹೋಗಲು ಬಿಟ್ಟರು. ನಾನು ಹಾಸ್ಟೆಲ್ ಕಡೆ ಓಡಿದಾಗ ಮತ್ತೆ ಬೈಕ್ ಶಬ್ದ ಕೇಳಿಸಿತು. ಭಯದಲ್ಲಿ ಪ್ರೊಫೆಸರ್ ಮನೆಯೊಳಗೆ ಓಡಿದೆ. ನಾನು 20 ನಿಮಿಷಗಳ ಕಾಲ ಅಲ್ಲಿಯೇ ಇದ್ದೆ. ನಂತರ ಪ್ರೊಫೆಸರ್ ನನ್ನನ್ನು ಅಲ್ಲಿಂದ ಐಐಟಿ ಬಿಎಚ್ಯು ಭದ್ರತಾ ಅಧಿಕಾರಿಗಳ ಬಳಿಗೆ ಕರೆದೊಯ್ದರು." ಎಂದು ದೂರಿನಲ್ಲಿ ಹೇಳಿದ್ದಾಳೆ.