ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ವಿನೋದ್ ತೋಮರ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ.
ಇಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಮಂಜೂರಿಗೆ ಮನವಿ ಮಾಡಿದರು. ಇದರ ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಅವರು 25 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಬ್ರಿಜ್ ಭೂಷಣ್ ಅವರಿಗೆ ಮಧ್ಯಂತರ ಪರಿಹಾರವನ್ನು ನೀಡಿದರು. ಇದೇ ವೇಳೆ, ಭಾರತೀಯ ಕುಸ್ತಿ ಫೆಡರೇಶನ್ನ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ಗೆ ಮಧ್ಯಂತರ ಜಾಮೀನು ನೀಡಲಾಗಿದೆ.
ಈ ಪ್ರಕರಣ ಸಂಬಂಧ ಬ್ರಿಜ್ ಭೂಷಣ್ ಮತ್ತು ವಿನೋದ್ ತೋಮರ್ ಅವರಿಗೆ ಜಾರಿ ಮಾಡಿದ್ದ ಸಮನ್ಸ್‌ಗೆ ಅನುಗುಣವಾಗಿ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣದಲ್ಲಿ ಜಾಮೀನು ಕೋರಿದರು. ಈ ಸಾಮಾನ್ಯ ಜಾಮೀನು ವಿಚಾರಣೆಯನ್ನು ಜುಲೈ 20ರಂದು ನಡೆಯಲಿದೆ. ಮುಂದಿನ ವಿಚಾರಣೆಯ ದಿನಾಂಕದವರೆಗೆ ಬ್ರಿಜ್ ಭೂಷಣ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ:'WFI ಮುಖ್ಯಸ್ಥರ ವಿರುದ್ಧ ರಸ್ತೆಗಳಲ್ಲಿ ಅಲ್ಲ, ನ್ಯಾಯಾಲಯದಲ್ಲಿ ಹೋರಾಡುತ್ತೇವೆ': ಕುಸ್ತಿಪಟುಗಳ ಸ್ಪಷ್ಟನೆ
ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಏಳು ಜನ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಇದರಲ್ಲಿ ಅಪ್ತಾಪ್ತ ಬಾಲಕಿ ಸಹ ಸೇರಿದ್ದಾರೆ. ಹೀಗಾಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಸೇರಿ ಎರಡು ಕೇಸ್ಗಳು ದಾಖಲಾಗಿದೆ. ಬ್ರಿಜ್ ಭೂಷಣ್ ವಿರುದ್ಧ ಜೂನ್ 15ರಂದು ದೆಹಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್ಶೀಟ್ನಲ್ಲಿ ಸೆಕ್ಷನ್ 354 (ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಕಲಂಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ. ಚಾರ್ಜ್ ಶೀಟ್‌ನಲ್ಲಿ ಡಬ್ಲ್ಯುಎಫ್‌ಐ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೆಸರೂ ಇದೆ. ಕಳೆದ ಒಂದು ದಶಕದಲ್ಲಿ ವಿವಿಧ ಸಮಯಗಳಲ್ಲಿ ಮತ್ತು ಸ್ಥಳಗಳಲ್ಲಿ ಅನುಚಿತ ಸ್ಪರ್ಶ, ಹಿಂಬಾಲಿಸುವುದು ಮತ್ತು ಬೆದರಿಸುವಂತಹ ಲೈಂಗಿಕ ಕಿರುಕುಳದ ಹಲವಾರು ಆರೋಪಗಳನ್ನು ಎರಡೂ ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಪ್ರಾಪ್ತೆಯ ಪ್ರಕರಣದಲ್ಲಿ ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಲಾದ ಎಫ್‌ಐಆರ್ ರದ್ದುಗೊಳಿಸುವಂತೆ ದೆಹಲಿ ಪೊಲೀಸರು ವರದಿಯನ್ನು ಸಲ್ಲಿಸಿದ್ದಾರೆ.