ನವದೆಹಲಿ:ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಎಂಪಿ/ಎಂಎಲ್ಎ (ಜನಪ್ರತಿನಿಧಿಗಳ) ಕೋರ್ಟ್ಗೆ ಇಂದು ವರ್ಗಾಯಿಸಿದೆ.
ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಏಳು ಜನ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಸೇರಿ ಎರಡು ಕೇಸ್ಗಳು ದಾಖಲಾಗಿದ್ದವು. ಜೂನ್ 15ರಂದು ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ವೇಳೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ರದ್ದು ಮಾಡುವ ಬಗ್ಗೆಯೂ ವರದಿ ಸಲ್ಲಿಸಿದ್ದರು.
ಇದನ್ನೂ ಓದಿ:Wrestlers Protest: "ಬ್ರಿಜ್ ಭೂಷಣ್ ವಿರುದ್ಧ ನಮ್ಮ ಹೋರಾಟ, ಸರ್ಕಾರದ ವಿರುದ್ಧ ಅಲ್ಲ"-ಸಾಕ್ಷಿ ಮಲಿಕ್ ದಂಪತಿ
ಇಂದು ಪ್ರಕರಣದ ವಿಚಾರಣೆ ವೇಳೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಹಿಮಾ ರಾಯ್ ಸಿಂಗ್ ಅವರು ಪೋಕ್ಸೋ ರದ್ದತಿ ಅರ್ಜಿಯನ್ನು ಪ್ರತ್ಯೇಕವಾಗಿ ಸಲ್ಲಿಸಲಾಗಿದೆಯೇ ಎಂದು ದೆಹಲಿ ಪೊಲೀಸರನ್ನು ಕೇಳಿದರು. ಆಗ ಠಾಣಾಧಿಕಾರಿ ಉಪೇಂದ್ರ ಸಿಂಗ್, ಪೋಕ್ಸೋ ಪ್ರಕರಣದಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ರದ್ದತಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಂತರ ನ್ಯಾ. ಮಹಿಮಾ ರೈ ಸಿಂಗ್ ಈ ಪ್ರಕರಣವನ್ನು ಎಂಪಿ/ಎಂಎಲ್ಎ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಇದೀಗ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜೀತ್ ಸಿಂಗ್ ಜಸ್ಪಾಲ್ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ.
ಜೂನ್ 27ರಿಂದ ಚಾರ್ಜ್‌ಶೀಟ್ ವಿಚಾರಣೆ:ಪ್ರಶಸ್ತಿ ವಿಜೇತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪವು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಆರೋಪ ಕೇಳಿ ಬಂದ ತಿಂಗಳುಗಳ ನಂತರ ಪೊಲೀಸರು ಅಂತಿಮವಾಗಿ ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್ಶೀಟ್ನ ಮುಂದಿನ ವಿಚಾರಣೆ ಜೂನ್ 27ರಂದು ನಡೆಯಲಿದೆ. ಜೂನ್ 15ರಂದು ಸಲ್ಲಿಕೆಯಾದ ಚಾರ್ಜ್ಶೀಟ್ನಲ್ಲಿ ಸೆಕ್ಷನ್ 354 (ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಕಲಂಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.