ಎರ್ನಾಕುಲಂ(ಕೇರಳ): ಸಿನಿಮಾಗಳಲ್ಲಿ ನಟನೆ ಮಾಡಲು ಹೆಚ್ಚಿನ ಅವಕಾಶ ನೀಡುವುದಾಗಿ ಭರವಸೆ ನೀಡಿ ನಟಿಯ ಮೇಲೆ ಖ್ಯಾತ ಮಲಯಾಳಂ ನಟ, ನಿರ್ದೇಶಕ ವಿಜಯ್ ಬಾಬು ಅತ್ಯಾಚಾರವೆಸಗಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಮೇಲೆ ಅತ್ಯಾಚಾರವೆಸಗಿರುವುದಕ್ಕೆ ಸಂಬಂಧಿಸಿದಂತೆ ಕೋಝಿಕೋಡ್ ಮೂಲದ ನಟಿ ದೂರು ನೀಡಿದ್ದು, ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಫೇಸ್ಬುಕ್ ಲೈವ್‌ಗೆ ಬಂದಿರುವ ನಟ ವಿಜಯ್ ಸಂತ್ರಸ್ತೆಯ ಹೆಸರು ಬಹಿರಂಗ ಮಾಡಿದ್ದಾರೆ.
ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಕಾನೂನು ಪರಿಣಾಮ ಎದುರಿಸಲು ನಾನು ಸಿದ್ಧ. ಈ ಆರೋಪ ನನ್ನ ಹೆಸರಿಗೆ ಕಳಂಕ ತಂದಿದೆ. ನನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಮುಜುಗರ ಉಂಟುಮಾಡಿದೆ ಎಂದು ಹೇಳಿದರು. ಫೇಸ್ಬುಕ್ನಲ್ಲಿ ಮೇಲಿಂದ ಮೇಲೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆಯ ಹೆಸರು ಹೇಳಿರುವ ನಟ, ನನ್ನ ಮೇಲೆ ಆರೋಪ ಮಾಡಿರುವ ನಟಿ ಕಳುಹಿಸಿರುವ ಅನೇಕ ಸಂದೇಶಗಳು ಸೇರಿದಂತೆ ಅನೇಕ ಪ್ರಮುಖ ಪುರಾವೆಗಳು ನನ್ನ ಬಳಿ ಇವೆ ಎಂದು ಹೇಳಿದ್ದಾರೆ.