ಗುವಾಹಟಿ (ಅರುಣಾಚಲಪ್ರದೇಶ) :ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಅರುಣಾಚಲಪ್ರದೇಶದ ವಸತಿ ಶಾಲೆಯಲ್ಲಿ 21 ವಿದ್ಯಾರ್ಥಿಗಳ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಆರೋಪ ಪ್ರಕರಣವನ್ನು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಈ ಕೇಸ್ನಲ್ಲಿ ಆರೋಪಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಿ, ವಿಶೇಷ ಕೋರ್ಟ್ ನೀಡಿದ್ದ ತೀರ್ಪಿಗೂ ಬೇಸರ ವ್ಯಕ್ತಪಡಿಸಿದೆ.
ಅರುಣಾಚಲ ಪ್ರದೇಶದ ವಸತಿ ಶಾಲೆಯೊಂದರಲ್ಲಿ 6 ರಿಂದ 12 ವರ್ಷ ವಯಸ್ಸಿನ 21 ವಿದ್ಯಾರ್ಥಿನಿಯರ ಮೇಲೆ ಹಾಸ್ಟೆಲ್ ವಾರ್ಡನ್ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ. ಇದರ ವಿಚಾರಣೆ ನಡೆಸಿದ್ದ ಪೋಕ್ಸೋ ವಿಶೇಷ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿತ್ತು. ಇದು ಹೈಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಪ್ರಕರಣವೇನು?:ಶಿಯೋಮಿ ಜಿಲ್ಲೆಯ ಮೊನಿಗಾಂಗ್‌ನ ಕರೋ ವಿಲೇಜ್‌ನಲ್ಲಿರುವ ಸರ್ಕಾರಿ ವಸತಿ ಶಾಲೆಯಲ್ಲಿ 21 ವಿದ್ಯಾರ್ಥಿಗಳ (15 ಹುಡುಗಿಯರು ಮತ್ತು 6 ಹುಡುಗರು) ಮೇಲೆ ಹಾಸ್ಟೆಲ್ ವಾರ್ಡನ್ ಯುಮ್ಕೆನ್ ಬಾಗ್ರಾ ಎಂಬಾತ 2019 ರಿಂದ 2022 ರ ನಡುವೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿದೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಕ್ಕಳ ವೈದ್ಯಕೀಯ ವರದಿಗಳು ಅವರ ಖಾಸಗಿ ಅಂಗಗಳಲ್ಲಿ ಗುರುತುಗಳು ಕಂಡುಬಂದಿದ್ದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂಬ ಅಂಶವನ್ನು ದೃಢಪಡಿಸುತ್ತದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿದ್ದ ಪೀಠವು ಆರೋಪಿಗೆ ನೀಡಿರುವ ಜಾಮೀನು ಅರ್ಜಿಯನ್ನು ರದ್ದುಗೊಳಿಸಿ, ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದೆ.