ಕಾನ್ಪುರ (ಉತ್ತರ ಪ್ರದೇಶ): ಈ ಬಾರಿ ಲೈಂಗಿಕ ಕಾರ್ಯಕರ್ತೆಯರೂ ಕೂಡ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುತ್ತಿದೆ. ಕಾನ್ಪುರ ಜಿಲ್ಲಾಡಳಿತ 997 ಮಂದಿ ಲೈಂಗಿಕ ಕಾರ್ಯಕರ್ತೆಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದೆ.
ಉತ್ತರ ಪ್ರದೇಶದಲ್ಲಿ ಈವರೆಗೆ, ಮತದಾರರ ಪಟ್ಟಿಗಳು ಪುರುಷ, ಮಹಿಳೆ ಮತ್ತು ತೃತೀಯ ಲಿಂಗಿ ಎಂಬ ಮೂರು ವರ್ಗದ ಮತದಾರರನ್ನು ಮಾತ್ರ ಒಳಗೊಂಡಿದ್ದವು. ಆದರೆ ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಲೈಂಗಿಕ ಕಾರ್ಯಕರ್ತೆಯರ ಹೆಸರನ್ನೂ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಕಾನ್ಪುರದಿಂದ ಮೊದಲ ಬಾರಿಗೆ 997 ಲೈಂಗಿಕ ಕಾರ್ಯಕರ್ತೆಯರು ಮತ ಚಲಾಯಿಸಲಿದ್ದಾರೆ. ಈ ಪೈಕಿ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ 545 ಮಂದಿ ಲೈಂಗಿಕ ಕಾರ್ಯಕರ್ತೆಯರು, ಕಿದ್ವೈನಗರದಿಂದ 445 ಮತ್ತು ಮಹಾರಾಜಪುರ ಕ್ಷೇತ್ರದಿಂದ 7 ಹೆಸರುಗಳನ್ನು ನೋಂದಾಯಿಸಲಾಗಿದೆ.
ಬುದ್ಧದೇವ್ ಕರ್ಮಾಕರ್ vs ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳ ಪ್ರಕರಣವನ್ನು ಆಲಿಸಿದ ಸುಪ್ರೀಂ ಕೋರ್ಟ್ ಜನವರಿ 10, 2022ರಂದು ಮತದಾರರ ಪಟ್ಟಿಗೆ ಲೈಂಗಿಕ ಕಾರ್ಯಕರ್ತೆಯರ ಹೆಸರನ್ನು ಸೇರಿಸಲು ಆದೇಶಿಸಿತ್ತು. ಅರ್ಜಿಯ ವಿಚಾರಣೆಯಲ್ಲಿ ಕೋರ್ಟ್, ಲೈಂಗಿಕ ಕಾರ್ಯಕರ್ತರಿಗೂ ಘನತೆಯ ಹಕ್ಕಿದೆ ಎಂದು ತೀರ್ಪು ನೀಡಿತ್ತು. ಲೈಂಗಿಕ ಕಾರ್ಯಕರ್ತೆಯರ ಜೀವನ ಸಾಮಾಜಿಕ ನಿರ್ಲಕ್ಷ್ಯದಿಂದ ಕೂಡಿದೆ. ಹೊರಗೆ ಹೋಗಲು ಸಾಧ್ಯವಾಗದ ಕಾರಣ ನಿವಾಸ ಪ್ರಮಾಣ ಪತ್ರವೂ ಇಲ್ಲ. ಹಾಗಾಗಿ ಎಲ್ಲಾ ರಾಜ್ಯಗಳಿಗೆ ಮತದಾರರ ಪಟ್ಟಿಯಲ್ಲಿ ಲೈಂಗಿಕ ಕಾರ್ಯಕರ್ತರ ಹೆಸರನ್ನು ಸೇರಿಸಲು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಇದನ್ನೂ ಓದಿ:Sexual abuse : ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಬೇಕಿದೆ ಅಗತ್ಯ ಕ್ರಮ..