ಹೈದರಾಬಾದ್(ತೆಲಂಗಾಣ): ತೆಲಂಗಾಣದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಗೊಲ್ಲಪಲ್ಲಿ ಗ್ರಾಮದಲ್ಲಿರುವ ಮಹಾಕಾಳಿ ದೇವಸ್ಥಾನದಲ್ಲಿರುವ ಮಹಾಕಾಳಿ ದೇವಿ ಮೂರ್ತಿಯ ಪಾದದಲ್ಲಿ ವ್ಯಕ್ತಿಯೊಬ್ಬನ ರುಂಡ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಮೃತರಿಗೆ ಸುಮಾರು 35 ವರ್ಷ ವಯಸ್ಸಾಗಿರಬಹುದು. ನಿಧಿಗಾಗಿ ನಡೆಸುವ ನರ ಬಲಿ ಪ್ರಕರಣವಾಗಿರಬಹುದು ಎಂಬ ವದಂತಿಗಳು ಹರಡುತ್ತಿವೆ. ಆತನನ್ನು ಬೇರೆ ಸ್ಥಳದಲ್ಲಿ ಕೊಲೆಮಾಡಿರಬಹುದು, ಆದರೆ ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ತಲೆಯನ್ನು ದೇವಿಯ ಪಾದದ ಬಳಿ ಇಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿಎಸ್ಪಿ ಆನಂದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನನ್ನು ಗುರುತಿಸುವ ಸಲುವಾಗಿ ತಲೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಮೂಲಗಳ ಪ್ರಕಾರ ಮೃತರನ್ನು ಸೂರ್ಯಪೇಟ್ ಜಿಲ್ಲೆಯ ಸುನ್ಯಾಪಹಾಡ್ ಗ್ರಾಮದ ಜಹೇಂದರ್ ನಾಯಕ್ (30) ಎಂದು ಗುರುತಿಸಲಾಗಿದೆ.