ಹೈದರಾಬಾದ್ (ತೆಲಂಗಾಣ): ಕೊರೊನಾ ಎರಡನೇ ಅಲೆಯಲ್ಲಿ ದೇಶವು ಸಿಲುಕಿರುವ ಈ ವೇಳೆ ಅನೇಕ ರಾಜ್ಯಗಳು ಸೋಂಕು ಹರಡುವುದನ್ನು ತಡೆಯಲು ಅಂತಾರಾಜ್ಯ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಸೇರಿದಂತೆ ಅನೇಕ ನಿರ್ಬಂಧಗಳನ್ನು ಹೇರಿದೆ.
ಕೇರಳ
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಸರ್ಕಾರ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿದೆ. ಇತರ ರಾಜ್ಯಗಳಿಂದ ಕೇರಳಕ್ಕೆ ಬರುವವರಿಗಿದ್ದ ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆ ಪರಿಷ್ಕರಿಸಿದೆ. ಬೇರೆ ರಾಜ್ಯಗಳಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅಲ್ಲದೇ ಈ ವರದಿ 48 ಗಂಟೆಗಳವರೆಗೆ ಮಾನ್ಯವಾಗಿರುತ್ತದೆ. ಪರೀಕ್ಷಾ ವರದಿ ಬರುವವರೆಗೂ ಅವರು ಹೋಂ ಕ್ವಾರಂಟೈನ್ಗೆ ಒಳಪಡಬೇಕು. ಯಾರಾದರೂ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳದ್ದಲ್ಲಿ ಅಂತವರು 14 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಕರ್ನಾಟಕ
ಮಹಾರಾಷ್ಟ್ರ, ಕೇರಳ, ಪಂಜಾಬ್ ಮತ್ತು ಚಂಡೀಗಢದಿಂದ ಬಸ್, ರೈಲು ಅಥವಾ ಯಾವುದೇ ವಾಹನದ ಮೂಲಕ ಕರ್ನಾಟಕ ಪ್ರವೇಶಿಸುವ ಜನರು ತಮ್ಮೊಂದಿಗೆ ಆರ್‌ಟಿ-ಪಿಸಿಆರ್ ರಿಪೋರ್ಟ್ ಕಡ್ಡಾಯವಾಗಿ ಹಿಡಿದು ಬರಬೇಕಿದೆ. ಈ ವರದಿ ಬಂದು 78 ಗಂಟೆಗಳು ಮೀರಿರಬಾರದು. ತುರ್ತು ಪ್ರಕರಣಗಳಾದಲ್ಲಿ ಅಂತವರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ. ಆದಾರೂ ಅವರು ಗಡಿಗಳಲ್ಲಿ, ರೈಲ್ವೆ ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿ ಸ್ವ್ಯಾಬ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ದೇಶೀಯ ಪ್ರಯಾಣಿಕರಿಗೆ ಕರ್ನಾಟಕ ಸರ್ಕಾರವು ಕ್ಯಾರೆಂಟೈನ್ ಕಡ್ಡಾಯಗೊಳಿಸಿಲ್ಲ. ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಸ್ವ-ಆರೋಗ್ಯ ಘೋಷಣೆ ಫಾರ್ಮ್ ಅನ್ನು ಸಲ್ಲಿಸಬೇಕು ಹಾಗೂ ಕೊರೊನಾ ನೆಗೆಟಿವ್ ವರದಿಯನ್ನು 'ಏರ್ ಸುವಿಧಾ' ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗುತ್ತದೆ.
ತಮಿಳುನಾಡು
ಇತರ ರಾಜ್ಯಗಳು ಮತ್ತು ವಿದೇಶಗಳಿಂದ ತಮಿಳುನಾಡಿಗೆ ಬರುವ ಎಲ್ಲಾ ಅಂತಾರಾಜ್ಯ ಪ್ರಯಾಣಿಕರು ರಾಜ್ಯದಲ್ಲಿ 72 ಗಂಟೆಗಳಿಗಿಂತ ಹೆಚ್ಚು ಕಾಲ ಇರುತ್ತಾರೆಂದರೆ ಅಂತವರಿಗೆ ತಮಿಳುನಾಡು ಸರ್ಕಾರವು ಇ-ಪಾಸ್ ಕಡ್ಡಾಯಗೊಳಿಸಿದೆ.
ಆಂಧ್ರಪ್ರದೇಶ
ಆಂಧ್ರಪ್ರದೇಶದ ಗಡಿಯಲ್ಲಿ ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಕೆಲವು ಗಡಿಭಾಗಗಳ ಚೆಕ್ ಪೋಸ್ಟ್‌ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಕೂಡ ಇಲ್ಲ. ಹೀಗಾಗಿ ಕರ್ನಾಟಕ, ತಮಿಳುನಾಡು ಮತ್ತು ಒಡಿಶಾದಿಂದ ಅನೇಕ ಜನರು ಯಾವುದೇ ನಿಯಮವಿಲ್ಲದೇ ಆಂಧ್ರ ಪ್ರವೇಶಿಸುತ್ತಿದ್ದಾರೆ.
ತೆಲಂಗಾಣ
ಪ್ರಯಾಣಿಕರ ಮೇಲೆ ನಿಗಾ ಇರಿಸುವಂತೆ ತೆಲಂಗಾಣ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಯೂ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕಷ್ಟೆ. ಶೀತ, ಜ್ವರ ಅಥವಾ ದೇಹದಲ್ಲಿ ಹೆಚ್ಚಿನ ಉಷ್ಣತೆ ಕಂಡುಬಂದ ಕೆಲವೇ ಮಂದಿಯನ್ನು ವಾಪಾಸ್ಸು ಕಳುಹಿಸಿರುವುದು ವರದಿಯಾಗಿದೆ.
ಮಹಾರಾಷ್ಟ್ರ
ಅತಿ ವೇಗವಾಗಿ ಹೆಚ್ಚೆಚ್ಚು ಸೋಂಕಿತರು ಕಂಡುಬರುತ್ತಿರುವ ಮಹಾರಾಷ್ಟ್ರಕ್ಕೆ ಪ್ರಯಾಣಿಸಲು ಯಾವುದೇ ನಿರ್ಬಂಧಗಳಿಲ್ಲ. ಆದರೂ ಔರಂಗಾಬಾದ್ ಮತ್ತು ಜಲ್ಗಾಂವ್‌ನಂತಹ ಕೆಲವು ಜಿಲ್ಲಾ ಆಡಳಿತಗಳು ನಿರ್ಬಂಧಗಳನ್ನು ವಿಧಿಸಿವೆ.