ಭುವನೇಶ್ವರ (ಒಡಿಶಾ):ಒಡಿಶಾ ರಾಜ್ಯದ ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 170 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾಹಿತಿಗಳ ಪ್ರಕಾರ ಬಲಸ್ವರ್ ಜಿಲ್ಲೆಯ ಬಹಂಗಾ ಬಳಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 4 ಭೋಗಿಗಳು ಹಳಿ ತಪ್ಪಿರುವುದಾಗಿ ತಿಳಿದು ಬಂದಿದೆ.
ಈ ನಡುವೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವರು ಘೋಷಣೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 2 ಲಕ್ಷ ನೀಡುವುದಾಗಿಯೂ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ.
ಈ ನಡುವೆ ಪ್ಯಾಸೆಂಜರ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿಯಾಗಿಲ್ಲ ಎಂದು ರೈಲ್ವೆ ಸಚಿವಾಲಯ ತಿಳಿಸಿದ್ದು,ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ. ಎರಡು ರೈಲುಗಳು ಹಳಿ ತಪ್ಪಿದ್ದು, 600- 700 ಪ್ರಯಾಣಿಕರನ್ನು ರಕ್ಷಣೆ ಮಾಡಿದ್ದು, 500 ಜನರು ರೈಲಿನಲ್ಲಿ ಸಿಲುಕಿದ್ದು, ಅವರ ರಕ್ಷಣೆಯನ್ನು ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಅಪಘಾತದ ಸ್ಥಳದಲ್ಲಿ ಸುಮಾರು 50 ಆಂಬ್ಯುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗಿದೆ. ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ (CDMO) ಮತ್ತು ಅವರ ತಂಡವು ಸ್ಥಳದಲ್ಲಿದ್ದು, ಆಂಬ್ಯುಲೆನ್ಸ್ ಮತ್ತು ಪ್ರಥಮ ಚಿಕಿತ್ಸೆಗೆ ನಿರ್ದೇಶನ ನೀಡುತ್ತಿದೆ. ಬೇರೆ ಜಿಲ್ಲೆಗಳಿಂದ 50 ವೈದ್ಯರನ್ನು ಕರೆಸಿಕೊಳ್ಳಲಾಗಿದೆ. SCB MCH ನಿಂದ ವೈದ್ಯರ ತಂಡವನ್ನು ಕಳುಹಿಸಲಾಗಿದೆ. ಭುವನೇಶ್ವರ ಮತ್ತು ಕಟಕ್‌ನಲ್ಲಿರುವ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಸ್ವೀಕರಿಸಲು ಸಿದ್ಧವಾಗಿವೆ ಎಂದು ಒಡಿಶಾ ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
132 ಗಾಯಾಳುಗಳನ್ನು ಸೊರೊ ಸಿಎಚ್‌ಸಿ, ಗೋಪಾಲ್‌ಪುರ ಸಿಎಚ್‌ಸಿ ಮತ್ತು ಖಾಂತಪದ ಪಿಎಚ್‌ಸಿಗೆ ಸ್ಥಳಾಂತರಿಸಲಾಗಿದೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬಾಲಸೋರ್ ಎಂಡಿ 47 ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಕೋರಮಂಡಲ್ ಎಕ್ಸ್‌ಪ್ರೆಸ್ ಹಳಿತಪ್ಪಿದ ಹಿನ್ನೆಲೆಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ತಾತ್ಕಾಲಿಕ ಸಹಾಯವಾಣಿ ಸಂಖ್ಯೆ 044- 2535 4771 ಆಗಿದ್ದು, ಈ ನಂಬರಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಕೇಂದ್ರ ರೈಲ್ವೆ ಸಚಿವ:ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಒಡಿಶಾದ ಬಾಲಸೋರ್‌ನ ಅಪಘಾತ ಸ್ಥಳಕ್ಕೆ ಧಾವಿಸಿದ್ದಾರೆ. ಮೂರು ರೈಲುಗಳು ಅಪಘಾತಕ್ಕೆ ಒಳಗಾಗಿವೆ. ಈ ಭೀಕರ ಅಪಘಾತದಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಈ ಬಗ್ಗೆ ರೈಲ್ವೆ ಸಚಿವರು ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ.
ಒಡಿಶಾ ಸಿಎಂರಿಂದಲೂ ಪರಿಸ್ಥಿತಿ ಮೇಲೆ ನಿಗಾ:ಈ ನಡುವೆ, ಒಡಿಶಾ ಸಿಎಂ ಅವರು, ಅಲ್ಲಿನ ಸಚಿವರಾದ ಪ್ರಮೀಳಾ ಮಲ್ಲಿಕ್ ಮತ್ತು ವಿಶೇಷ ಪರಿಹಾರ ಆಯುಕ್ತರಿಗೆ (ಎಸ್‌ಆರ್‌ಸಿ) ತಕ್ಷಣ ಅಪಘಾತ ಸ್ಥಳಕ್ಕೆ ತಲುಪುವಂತೆ ಸೂಚಿಸಿದ್ದಾರೆ. ಸಚಿವರು ಮತ್ತು ಎಸ್‌ಆರ್‌ಸಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ.
ಇನ್ನು ರೈಲ್ವೆ ಭೋಗಿಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿಲುಕಿ ಹಾಕಿಕೊಂಡಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಈಗಾಗಲೇ ತಂಡಗಳು ಸ್ಥಳಕ್ಕೆ ತೆರಳಿವೆ. ಬಾಲಸೋರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಆಡಳಿತ ಅಧಿಕಾರಿಗಳು ಜೊತೆಗೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.
ನವೀನ್ ಪಟ್ನಾನಾಯಕ್ ಹೇಳಿದ್ದೇನು?: ಈ ರೈಲ್ವೇ ಅಪಘಾತದ ಬಗ್ಗೆ ತಿಳಿಯಿತು. ಈಗಷ್ಟೇ ಪರಿಸ್ಥಿತಿಯನ್ನು ಅವಲೋಕಿಸಿದ್ದೇನೆ. ನಾಳೆ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಹೇಳಿದ್ದಾರೆ.