ಲಖಿಂಪುರ್ ಖೇರಿ(ಉತ್ತರ ಪ್ರದೇಶ): ಲಖಿಂಪುರ್ ಖೇರಿ ಗಲಭೆಯಲ್ಲಿ 8 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆಎಂದು ಹೆಚ್ಚುವರಿ ಎಸ್ಪಿ ಅರುಣ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ .
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಪ್ರತಿಭಟನಾ ನಿರತ ರೈತರ ಮೇಲೆ ತನ್ನ ಕಾರನ್ನು ಚಲಾಯಿಸಿರುವ ಆರೋಪ ಕೇಳಿಬಂದಿದೆ. ಪರಿಣಾಮ ಹೋರಾಟಗಾರರು ಮೂರು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಯುಪಿಯ ಲಖಿಂಪುರ್ ಖೇರಿಯಲ್ಲಿ ಇಂದು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ಯುಪಿ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಬೇಕಿತ್ತು. ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು. ಅವರು ಉಪ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಲು ಅಳವಡಿಸಿದ್ದ ಹೋರ್ಡಿಂಗ್‌ಗಳನ್ನು ಮುರಿದು ಟಿಕೊನಿಯಾದಲ್ಲಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅನ್ನು ವಶಪಡಿಸಿಕೊಂಡರು.
ನಗರದಲ್ಲಿ ನಡೆದ ಸಭೆಯಲ್ಲಿ ಅಜಯ್ ಮಿಶ್ರಾ ಅವರು ರೈತರು ವಿರುದ್ಧ ಹೇಳಿಕೆ ನೀಡಿದ್ದರು. ಪ್ರತಿಭಟನೆ ನಡೆಸುತ್ತಿರುವವರು ಪಾಲಿಯಾವನ್ನು ಬಿಡುವುದು ಮಾತ್ರವಲ್ಲದೆ ಜಿಲ್ಲೆಯನ್ನು ತೊರೆಯಬೇಕು ಎಂದು ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.