ವೈಶಾಲಿ (ಬಿಹಾರ):ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿರುವ ಡೈರಿ ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಅಮೋನಿಯಾ ಅನಿಲ ಸೋರಿಕೆಯಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. 35 ಮಂದಿ ಸದರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರನ್ನು ಬೇರೆ ಬೇರೆ ಖಾಸಗಿ ನರ್ಸಿಂಗ್ ಹೋಂಗಳಿಗೆ ದಾಖಲಿಸಲಾಗಿದೆ. ಕಾರ್ಖಾನೆಯಿಂದ ಸೋರಿಕೆಯಾದ ಅಮೋನಿಯಾ ಅನಿಲವು ಸುತ್ತಮುತ್ತಲಿನ ಪ್ರದೇಶಗಳಿಗೆ ನಾಲ್ಕು ಕಿಲೋಮೀಟರ್ ವ್ಯಾಪ್ತಿಯವರೆಗೆ ಹರಡಿದೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಗುರುತು ತಿಳಿದುಬಂದಿಲ್ಲ. ಮೃತ ವ್ಯಕ್ತಿ ರಾಜ್ ಫ್ರೆಶ್ ಡೈರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅನಿಲ ಸೋರಿಕೆಯ ಕಾರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಅಪಾಯಕಾರಿ ಅನಿಲ ರಜಪೂತ ಕಾಲೋನಿಯಿಂದ ಪಟ್ಟಣ ಪೊಲೀಸ್ ಠಾಣೆಯವರೆಗೆ ವ್ಯಾಪಿಸಿತ್ತು. ಇದರಿಂದ ಅಲ್ಲಿನ ಕಾಲೋನಿಗಳಲ್ಲಿ ವಾಸಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ಉಸಿರಾಡಲು ಆಗದೇ, ವಿಷಾನಿಲದಿಂದ ಅಸ್ವಸ್ಥರಾಗಿದ್ದಾರೆ. ಸ್ಥಳೀಯ ಆಡಳಿತದ ಹೊರತಾಗಿ, ಅಗ್ನಿಶಾಮಕ ದಳದ ತಂಡ ಹಾಗೂ ಪಾಟ್ನಾದಿಂದ ಕ್ಯೂಆರ್‌ಟಿ (ಕ್ವಿಕ್ ರೆಸ್ಪಾನ್ಸ್ ಟೀಮ್) ತಂಡವು ಕಾರ್ಖಾನೆಗೆ ಆಗಮಿಸಿ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ. 15 ರಿಂದ 20 ನಿಮಿಷಗಳಲ್ಲಿ ಅನಿಲ ಸೋರಿಕೆ ನಿಯಂತ್ರಣಕ್ಕೆ ಬಂದಿದೆ ಎಂದು ಆಡಳಿತ ಹೇಳಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ವೈಶಾಲಿ ಡಿಎಂ ಜಸ್ಪಾಲ್ ಮೀನಾ, ವೈಶಾಲಿ ಎಸ್ಪಿ ರವಿ ರಂಜನ್ ಕುಮಾರ್ ಮತ್ತು ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಹಾಜಿಪುರ ಕೈಗಾರಿಕಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಜ್ ಫ್ರೆಶ್ ಫ್ಯಾಕ್ಟರಿಗೆ ಆಗಮಿಸಿದ್ದಾರೆ. ಮೊದಲು ಅಮೋನಿಯಾ ಅನಿಲದ ಪರಿಣಾಮವನ್ನು ಕಡಿಮೆ ಮಾಡಲು ಅಗ್ನಿಶಾಮಕ ದಳದ ತಂಡವು 3 ಅಗ್ನಿಶಾಮಕ ವಾಹನಗಳ ಮೂಲಕ ಅನಿಲ ಹಬ್ಬಿದ ಪ್ರದೇಶದಲ್ಲಿ ತಡರಾತ್ರಿಯವರೆಗೂ ನೀರನ್ನು ಚಿಮುಕಿಸಿದ್ದಾರೆ.