ನವದೆಹಲಿ :ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಮೂವರು ಕುವೈತ್ ಪ್ರಜೆಗಳು ಸಾಗಿಸುತ್ತಿದ್ದ 2.06 ಕೋಟಿ ರೂಪಾಯಿ ಮೌಲ್ಯದ 4001 ಗ್ರಾಂ ಚಿನ್ನ ಮತ್ತು ಬಟ್ಟೆ, ಗುದನಾಳದಲ್ಲಿ ಸಾಗಿಸಲಾಗುತ್ತಿದ್ದ 3.43 ಕೋಟಿ ರೂಪಾಯಿ ಮೌಲ್ಯದ 6552 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ. ಕಸ್ಟಮ್ಸ್ ಆಕ್ಟ್-1962 ಅಡಿ ಕೇಸ್ ದಾಖಲಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಬಗ್ಗೆ ದೆಹಲಿಯ ಕಸ್ಟಮ್ಸ್ ಅಧಿಕಾರಿಗಳು ಸಾಮಾಜಿಕ ಮಾಧ್ಯಮವಾದ X (ಹಿಂದಿನ ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸ್ಪಾಟ್ ಪ್ರೊಫೈಲಿಂಗ್ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ಮೂವರು ಕುವೈತ್ ಪ್ರಜೆಗಳನ್ನು ಬಂಧಿಸಲಾಗಿದೆ. ಅವರಿಂದ 2.06 ಕೋಟಿ ರೂಪಾಯಿ ಮೌಲ್ಯದ 4001 ಗ್ರಾಂ ತೂಕದ ಬೆಳ್ಳಿ ಲೇಪಿತ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮೂರು ಪ್ರತ್ಯೇಕ ಕೇಸ್:ಉಳಿದ ಮೂರು ಪ್ರಕರಣಗಳಲ್ಲಿ ಇದೇ ವಿಮಾನ ನಿಲ್ದಾಣದಲ್ಲಿ ಕಂದಾಯ ಅಧಿಕಾರಿಗಳು ಕಳ್ಳಸಾಗಾಣಿಕೆ ಮಾಡುತ್ತಿದ್ದ ಐದು ಜನರನ್ನು ವಶಕ್ಕೆ ಪಡೆದುಕೊಂಡು ದೂರು ದಾಖಲಿಸಿದೆ. ಅವರು ಬಟ್ಟೆ ಮತ್ತು ಗುದನಾಳದಲ್ಲಿ ಬಚ್ಚಿಟ್ಟಿದ್ದ 3.43 ಕೋಟಿ ರೂಪಾಯಿ ಮೌಲ್ಯದ 6,522 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.