ತಿರುವನಂತಪುರಂ(ಕೇರಳ) :ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸಿವೆ. ಕೊಟ್ಟಾಯಂ ಜಿಲ್ಲೆಯ ಕೂಟಿಕಲ್ನಲ್ಲಿ ಭೂಕುಸಿತ ಸಂಭವಿಸಿ ಒಂದೇ ಕುಟುಂಬದ 6 ಮಂದಿ ಸೇರಿ ಒಟ್ಟೂ 7 ಜನರು ಸಾವನ್ನಪ್ಪಿದ್ದಾರೆ.
ಮಳೆಯಿಂದ ಇದುವರೆಗೆ 12ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಕೂಟಿಕಲ್ನ ಮಾರ್ಟಿನ್ ಎಂಬುವರ ಕುಟುಂಬ ಭೂಕುಸಿತಕ್ಕೆ ಸಿಲುಕಿದೆ. ಮಾರ್ಟಿನ್ ಸೇರಿ ಅವರ ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಈ ಪ್ರದೇಶದ ಮೂರು ಮನೆಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಇತರ ಮೂವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಸೇನಾ ಸಿಬ್ಬಂದಿಯ ತಂಡವು ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ಆಗಮಿಸಿದೆ.
ಎಂಥಾಯರ್, ಕೂಟ್ಟಕ್ಕಾಯಂ ಮತ್ತು ಕಾಂಜಿರಪಲ್ಲಿ ಪಟ್ಟಣಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಪ್ರದೇಶದ ಅನೇಕ ಜನರು ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಪ್ರವಾಹ ಭಯದಲ್ಲಿ ಬದುಕುವಂತಾಗಿದೆ. ಕಾಂಜಿರಪಲ್ಲಿಯಲ್ಲಿ 13 ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 86 ಕುಟುಂಬಗಳ 222 ಜನರು ಆಶ್ರಯ ಪಡೆದಿದ್ದಾರೆ.
ಇಡುಕ್ಕಿ ಭೂಕುಸಿತದಲ್ಲಿ 8 ಜನರು ಕಾಣೆ:
ಇಡುಕ್ಕಿಯ ಕೊಕ್ಕಾಯಾರ್ನಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ಏಳು ಮನೆಗಳು ಕೊಚ್ಚಿ ಹೋಗಿದ್ದು, 8 ಜನರು ನಾಪತ್ತೆಯಾಗಿದ್ದಾರೆ. ಎನ್ಡಿಆರ್ಎಫ್ ತಂಡದಿಂದ ರಕ್ಷಣಾ ಕಾರ್ಯ ನಡೆದಿದೆ.