ಪಾಟ್ನಾ (ಬಿಹಾರ):ಬಿಹಾರದಲ್ಲಿ ಶಂಕಿತ ಭಯೋತ್ಪಾದನಾ ಜಾಲವೊಂದು ಪತ್ತೆಯಾದ ಬೆನ್ನಲ್ಲೆಯಲ್ಲಿ ಎನ್ಐಎ ಮತ್ತು ಪೊಲೀಸ್ ಇಲಾಖೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ರಾಜಧಾನಿ ಪಾಟ್ನಾ, ಮುಜಾಫರ್‌ಪುರ್, ಮೋತಿಹಾರಿ ಸೇರಿ ವಿವಿಧ ಕಡೆಗಳಲ್ಲಿ ಜಂಟಿಯಾಗಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿವೆ. ಈ ವೇಳೆ ಇನ್ನಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ.
ದೇಶ ವಿರೋಧಿ ಚಟುವಟಿಕೆಗಳ ಸಂಬಂಧ ಪಾಟ್ನಾದ ಫುಲ್ವಾರಿ ಷರೀಫ್ ಎಂಬ ಪ್ರದೇಶದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ, ಶಂಕಿತ ಭಯೋತ್ಪಾದನಾ ಜಾಲ ಬಯಲಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಜೊತೆ ನಂಟು ಹೊಂದಿದ್ದ ಈ ಜಾಲ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಬೇಕೆಂಬ ಉದ್ದೇಶದಿಂದ 'ಮಿಷನ್ 2047' ಎಂಬ ಹೆಸರಲ್ಲಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ಸಂಬಂಧ ಗುರುವಾರವೇ ನಿವೃತ್ತ ಸಬ್ ಇನ್ಸ್‌ಪೆಕ್ಟರ್ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
ಶುಕ್ರವಾರ ಕೂಡ ಎನ್ಐಎ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ಇದುವರೆಗೆ 7 ಜನರನ್ನು ಬಂಧಿಸಿದ್ದಾರೆ. ಮುಹಮ್ಮದ್ ಜಲಾಲ್ದನ್, ಅಥರ್ ಪರ್ವಿಜ್, ಅರ್ಮಾನ್ ಮಲಿಕ್, ತಾಹಿರ್ ಅಹ್ಮದ್, ಶಬೀರ್ ಮಲಿಕ್, ಶಮೀಮ್ ಅಖ್ತರ್ ಮತ್ತು ಇಲಿಯಾಸ್ ತಾಹಿರ್ ಅಲಿಯಾಸ್ ಮುಜ್ರೆಬ್ ಎಂಬುವವರೇ ಬಂಧಿತ ಆರೋಪಿಗಳಿದ್ದಾರೆ.
ಪಾಕ್ - ಬಾಂಗ್ಲಾಕ್ಕೆ ಕರೆ: ಬಂಧಿತ ಆರೋಪಿಗಳ ಪೈಕಿ ಇಲಿಯಾಸ್ ತಾಹಿರ್ ಅಲಿಯಾಸ್ ಮುಜ್ರೆಬ್ ಎಂಬ ಆರೋಪಿ ಬಗ್ಗೆ ಬೆಚ್ಚಿಬೀಳಿಸುವ ಅಂಶಗಳು ಬಯಲಾಗಿವೆ. ಇವನು ಗಜ್ವಾ-ಎ-ಹಿಂದ್ ಎಂಬ ಗ್ರೂಪ್ ರಚಿಸುವ ಮೂಲಕ ಪಾಕಿಸ್ತಾನದ ಹಲವಾರು ಜನರನ್ನು ಈ ಗ್ರೂಪ್ಗೆ ಸೇರಿಸಿದ್ದ. ಅಲ್ಲದೇ, ವಾಟ್ಸ್ಆ್ಯಪ್ ಮತ್ತು ಮೆಸೆಂಜರ್ ಮೂಲಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಕರೆ ಮಾಡಿ ಮಾತನಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ಧಾರೆ.