ಭುವನೇಶ್ವರ(ಒಡಿಶಾ) ಜೂನ್ 2 ರಂದು 300 ಜನರನ್ನು ಬಲಿ ಪಡೆದ ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ನಿಲ್ದಾಣದಲ್ಲಿ ನಡೆದ ತ್ರಿವಳಿ ರೈಲು ಅಪಘಾತ ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿತ ಮೂವರು ಸಿಬ್ಬಂದಿ ಸೇರಿ ಕನಿಷ್ಠ ಏಳು ರೈಲ್ವೆ ಉದ್ಯೋಗಿಗಳನ್ನು ಆಗ್ನೇಯ ರೈಲ್ವೆ ವಿಭಾಗವು ಅಮಾನತುಗೊಳಿಸಿದೆ.
ತಪ್ಪಾದ ಸಿಗ್ನಲಿಂಗ್ ಮತ್ತು ಸಿಬ್ಬಂದಿ ಅಚಾತುರ್ಯದಿಂದ ಅಪಘಾತಕ್ಕೆ ಕಾರಣವಾಗಿದ್ದ ಏಳು ಉದ್ಯೋಗಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆಗ್ನೇಯ ರೈಲ್ವೆ (ಎಸ್‌ಇಆರ್) ಪ್ರಧಾನ ವ್ಯವಸ್ಥಾಪಕ ಅನಿಲ್ ಕುಮಾರ್ ಮಿಶ್ರಾ ಬುಧವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ ಅವರು, ಬಾಲಸೋರ್ ಜಿಲ್ಲೆಯ ಬಹನಾಗ ಬಜಾರ್ ರೈಲು ನಿಲ್ದಾಣ ಹತ್ತಿರ ಒಡಿಶಾದಲ್ಲಿ ತ್ರಿವಳಿ ರೈಲುಗಳು ಡಿಕ್ಕಿಯಾಗಿ ಸುಮಾರು 300 ಜನರು ಮೃತಪಟ್ಟರೆ, 1,200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಎಚ್ಚೆತ್ತುಕೊಂಡಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಸಿಬಿಐನಿಂದ ಬಂಧಿಸಲ್ಪಟ್ಟಿದ್ದ ಮೂವರು ಸೇರಿ ಏಳು ಮಂದಿ ನೌಕರರನ್ನು ರೈಲ್ವೆ ಇಲಾಖೆಯು ಅಮಾನತುಗೊಳಿಸಿದೆ. ನಿಯಮಗಳ ಪ್ರಕಾರ, 24 ಗಂಟೆಗಳ ಕಾಲ ಬಂಧಿಸಿದ್ದ ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರೊಂದಿಗೆ ಹಿರಿಯ ರೈಲ್ವೆ ಅಧಿಕಾರಿಗಳು ಗೋಪಿನಾಥಪುರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಈ ತಿಂಗಳ ಆರಂಭದಲ್ಲಿ, ಸಿಬಿಐ ಮೂವರು ರೈಲ್ವೆ ಅಧಿಕಾರಿಗಳನ್ನು ಬಂಧಿಸಿತ್ತು. ಹಿರಿಯ ಸೆಕ್ಷನ್ ಎಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮೊಹಂತ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಟೆಕ್ನಿಷಿಯನ್ ಪಪ್ಪು ಕುಮಾರ್ ಅವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 304 ಮತ್ತು 201 ಅಡಿಯಲ್ಲಿ ದೂರು ದಾಖಲಿಸಿದ್ದು, ಮೂವರನ್ನು ಸಿಬಿಐ ನಾಲ್ಕು ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.