ಗುವಾಹಟಿ (ಅಸ್ಸೋಂ):ಈಶಾನ್ಯ ರಾಜ್ಯ ಅಸ್ಸೋಂದ ಬಜಾಲಿ ಜಿಲ್ಲೆಯಲ್ಲಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮಹಿಳಾ ಪೊಲೀಸ್ ಅಧಿಕಾರಿ, ಅವರ ಪತಿ ಹಾಗೂ ಇತರ ನಾಲ್ವರು ಪೊಲೀಸರು ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ಗಳು ಸಹ ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಜಾಲಿ ಜಿಲ್ಲೆಯ ಹಿಂದಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮತ್ತು ಆಕೆಯ ಪತಿ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಶನಿವಾರ ತಡರಾತ್ರಿಯಿಂದ ಬಂಧಿಸಲಾಗಿದೆ. ಇದಕ್ಕೂ ಮುನ್ನ ಅದೇ ದಿನ ಇತರ ನಾಲ್ವರು ಪೊಲೀಸರನ್ನು ಬಂಧಿಸಲಾಗಿತ್ತು. ಸದ್ಯ ಬಂಧಿತ ಎಲ್ಲ ಏಳು ಜನ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಅಧಿಕಾರಿ ಭಾನುವಾರ ಮಾಹಿತಿ ನೀಡಿದ್ದಾರೆ.
ಆಗಸ್ಟ್ 31ರಂದು ಅಸ್ಸೋಂ ಸಿಐಡಿ ಕಚೇರಿಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಏಳು ಜನರನ್ನು ಬಂಧಿಸಲಾಗಿದೆ. ಈ ಕುರಿತು ಶುಕ್ರವಾರ ಟ್ವೀಟ್ ಮಾಡಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್, ಆಗಸ್ಟ್ ಮೊದಲ ವಾರದಲ್ಲಿ ಬಜಾಲಿ ಜಿಲ್ಲೆಯ ಕೆಲವು ಸಿಬ್ಬಂದಿ ಹಣಕ್ಕಾಗಿ ಬೇಡಿಕೆಯ ಇಟ್ಟಿರುವ ಪೊಲೀಸ್ ಪ್ರಧಾನ ಕಚೇರಿಯು ದೂರು ಸ್ವೀಕರಿತ್ತು ಎಂದು ಹೇಳಿದ್ದರು.
ಇದನ್ನೂ ಓದಿ:ಕೊರಿಯಾ ಪ್ರಜೆಯಿಂದ 5000 ರೂಪಾಯಿ ಲಂಚ ಪಡೆದ ಟ್ರಾಫಿಕ್ ಪೊಲೀಸ್.. ವಿಡಿಯೋ ವೈರಲ್
ಈ ಸಂಬಂಧ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶನಾಲಯವು ಆರೋಪಿತ ಪೊಲೀಸರಿಗೆ ಬಲೆ ಬೀಸಲು ಪ್ರಯತ್ನಿಸಿತ್ತು. ಆದರೆ, ಆರೋಪಿತರು ಎಚ್ಚೆತ್ತುಕೊಂಡಿದ್ದರಿಂದ ಇದು ಯಶಸ್ವಿಯಾಗದಿದ್ದರೂ, ಅವರ ವಿರುದ್ಧ ಸ್ವೀಕರಿಸಿರುವ ಪ್ರಾಥಮಿಕವಾಗಿ ದೂರು ನಿಜ ಎಂದು ಕಂಡುಬಂದ ಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದರು.
ಇದೀಗ ಬಜಾಲಿ ಜಿಲ್ಲೆಯ ಹಿಂದಿನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಆಕೆಯ ಪತಿ, ಪಟಾಚಾರ್ಕುಚಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಎಎಸ್‌ಪಿ ಹಾಗೂ ಇದೇ ಠಾಣಾ ವ್ಯಾಪ್ತಿಯ ಭವಾನಿಪುರ ಹೊರಠಾಣೆ ಉಸ್ತುವಾರಿ ಸಬ್ ಇನ್ಸ್‌ಪೆಕ್ಟರ್, ಬಜಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಇಬ್ಬರು ಕಾರು ಚಾಲಕರು ಮತ್ತು ಆಗಿನ ಹೆಚ್ಚುವರಿ ಎಸ್‌ಪಿ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಬಂಧಿಸಲಾಗಿದೆ. ಅಲ್ಲದೇ, ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನೂ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಮತ್ತೊಂದೆಡೆ, ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗುವ ಯಾವುದೇ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಡಿಜಿಪಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. (ಪಿಟಿಐ)
ಇದನ್ನೂ ಓದಿ:CBI: ಲಂಚ: ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಸೇರಿ ನಾಲ್ವರ ಬಂಧಿಸಿದ ಸಿಬಿಐ