ರಾಜಸ್ಥಾನ:ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಹನುಮಾನ್ಗಡ್ ಜಿಲ್ಲೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಓವರ್ಟೇಕ್ ಮಾಡುವಾಗ ಅಪಘಾತ ನಡೆದಿದೆ ಎಂದು ಹೇಳಲಾಗಿದೆ. ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಹಾಗೂ ಒಂದು ಹೆಣ್ಣು ಮಗು ಸೇರಿ ಏಳು ಜನ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಇಲ್ಲಿನ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ದುರಂತದ ಬಳಿಕ ಟ್ರಕ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ತಂದೆ, ಮಕ್ಕಳು, ಮೊಮ್ಮಕ್ಕಳು ಸಾವು: ನಾಲ್ವರು ಅಪ್ರಾಪ್ತ ಮೊಮ್ಮಕ್ಕಳು ಸೇರಿ ಪೂರ್ತಿ ಕುಟುಂಬದ ಜೊತೆ ಪರಂಜೀತ್ ಕೌರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪರಂಜೀತ್ ಕೌರ್ (60) ಸೇರಿ ಅವರ ಇಬ್ಬರು ಮಕ್ಕಳು, ಇಬ್ಬರು ಮೊಮ್ಮಕ್ಕಳು ಮತ್ತು ಇಬ್ಬರು ಸೊಸೆಯಂದಿರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಇಬ್ಬರು ಮೊಮ್ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಲ್ಲಿ ಪರಂಜೀತ್ ಕೌರ್ (60), ಅವರ ಮಕ್ಕಳಾದ ರಾಮಪಾಲ್ (36), ಖುಶ್ವಿಂದರ್ (25), ಸೊಸೆಯಂದಿರಾದ ರೀಮಾ (35), ಪರಂಜೀತ್ (22) ಮತ್ತು ಮೊಮ್ಮಕ್ಕಳಾದ ಮಂಜೀತ್ (5), ಮನ್ರಾಜ್ (2), ಆಕಾಶದೀಪ್(14) ಹಾಗೂ ರೀತ್ (12) ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹನುಮಾನ್ಗಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಎಸ್ಪಿ ರಾಜೀವ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕಾರಿನಲ್ಲಿ 9 ಜನ ಪ್ರಯಾಣಿಸುತ್ತಿದ್ದರು. ಇದರಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗಿದ್ದು, ಎಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರು ತಿಳಿಸಿದ್ದಾರೆ.
ಓವರ್ಟೇಕ್ ಭರದಲ್ಲಿ ದುರಂತ:ಓವರ್ಟೇಕ್ ಭರದಲ್ಲಿ ಟ್ರೋಲಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕಾರು ಮಧ್ಯದಲ್ಲಿ ಎರಡು ಭಾಗಗಳಾಗಿ ಒಡೆದಿದ್ದು, ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಿಕನೇರ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹನುಮಾನ್ಗಡ್ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅವರು ದುರಂತದ ಬಗ್ಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರದಲ್ಲಿ ಗುಣಮುಖರಾಗಲಿ' ಎಂದು ಸಂಸದರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ ರಸ್ತೆ ಅಪಘಾತ: ಮೃತರ ಸಂಖ್ಯೆ 13ಕ್ಕೆ ಏರಿಕೆ.. 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ