ಡುಂಗಾರಪುರ (ರಾಜಸ್ಥಾನ):ಟ್ರಕ್ ಮತ್ತು ಕ್ರೂಸರ್ ಜೀಪ್ ನಡುವೆ ಭೀಕರ ಅಪಘಾತ ನಡೆದು, ಏಳು ಜನರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಡುಂಗಾರಪುರ ಜಿಲ್ಲೆಯಲ್ಲಿ ಇಂದು (ಭಾನುವಾರ) ನಡೆಯಿತು. ಇತರ ಹತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕ್ರೂಸರ್ ಜಖಂಗೊಂಡಿದೆ.
ಬಿಚ್ಚಿವಾಡ ಪೊಲೀಸ್ ಠಾಣಾ ವ್ಯಾಪ್ತಿಯ ರತನ್ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ಜರುಗಿದೆ. ಟ್ರಕ್ ಗುದ್ದಿದ ರಭಸಕ್ಕೆ ಕ್ರೂಸರ್ ಪಲ್ಟಿ ಹೊಡೆದು ನಜ್ಜುಗುಜ್ಜಾಗಿದೆ. ಪರಿಣಾಮ ಎಲ್ಲಾ ಏಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಉಳಿದಂತೆ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಡುಂಗಾರಪುರಕ್ಕೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಲಕ್ಷ್ಮೀ ನಾರಾಯಣ ಮಂತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಂದನ್ ಕನ್ವರಿಯಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಲು ಆಸ್ಪತ್ರೆಗೂ ತೆರಳಿದ್ದಾರೆ.
ಬಿಚ್ಚಿವಾಡ ಠಾಣಾಧಿಕಾರಿ ಮದನ್ ಲಾಲ್ ಪ್ರತಿಕ್ರಿಯಿಸಿ, ''ಮುಂದೆ ಸಾಗುತ್ತಿದ್ದ ಕ್ರೂಸರ್ಗೆ ಹಿಂದಿನಿಂದ ವೇಗವಾಗಿ ಬಂದು ಟ್ರಕ್ ಗುದ್ದಿದೆ. ಇದರಿಂದ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಟ್ರಕ್ಗೆ ಹಿಂಬದಿಯಿಂದ ಟೆಂಪೋ ಟ್ರಾವೆಲರ್ ಡಿಕ್ಕಿ.. 12 ಮಂದಿ ಭಕ್ತರ ದುರ್ಮರಣ, 20 ಜನರಿಗೆ ಗಾಯ
ಜೆಎನ್ಯು ಕ್ಯಾಂಪಸ್ನಲ್ಲಿ ಓರ್ವ ಸಾವು:ದೆಹಲಿಯಲ್ಲಿರುವ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ಯು) ಕ್ಯಾಂಪಸ್ನಲ್ಲಿ ಶನಿವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ವರದಿಯಾಗಿದೆ. ರಾತ್ರಿ 2.30ರ ಸುಮಾರಿಗೆ ಕೆಟಎಂ ಬೈಕ್ಗಳಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು, ರಸ್ತೆಯಲ್ಲಿ ನಡೆದುಕೊಂಡು ತೆರಳುತ್ತಿದ್ದ ಇತರ ಇಬ್ಬರು ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದರ ಪರಿಣಾಮ ಬೈಕ್ ಸವಾರ ಅಂಶುಕುಮಾರ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಈತ ರಷ್ಯನ್ ಭಾಷೆಯಲ್ಲಿ ಕಲಾ ಪದವಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ. ಬೈಕ್ನ ಹಿಂಬದಿ ಸವಾರ ವಿಶಾಲ್ ಕುಮಾರ್ ಎಂಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತ ಜೆಎನ್ಯು ವಿದ್ಯಾರ್ಥಿಯಲ್ಲ. ಪಾದಚಾರಿ ವಿದ್ಯಾರ್ಥಿಗಳಾದ ಸಚಿನ್ ಶರ್ಮಾ, ಮೃಗಾಂಕ್ ಯಾದವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಲ್ಲಿ ಶರ್ಮಾ ಸ್ಥಿತಿ ಗಂಭೀರವಾಗಿದೆ. ಯಾದವ್ ಆರೋಗ್ಯ ಸ್ಥಿರವಾಗಿದ್ದು, ಈ ಇಬ್ಬರೂ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿದ್ದಾರೆ. ಈ ಘಟನೆ ನಡೆದಾಗ ತಮ್ಮ ಹಾಸ್ಟೆಲ್ನತ್ತ ತೆರಳುತ್ತಿದ್ದರು. ಗಾಯಾಳುಗಳು ಏಮ್ಸ್ ಟ್ರಾಮಾ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತಿರುವಣ್ಣಮಲೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು