ಕಿಶ್ತ್ವಾರ್ (ಜಮ್ಮು ಮತ್ತು ಕಾಶ್ಮೀರ): ಕಾರ್ಮಿಕರನ್ನು ಸಾಗಿಸುತ್ತಿದ್ದ ಕ್ರೂಸರ್ ವಾಹನವೊಂದು ರಸ್ತೆಯಿಂದ ಜಾರಿ 300 ಅಡಿ ಆಳದ ಕಮರಿಗೆ ಬಿದ್ದ ಘಟನೆ ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆಯಿತು. ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಸುದೇಶ್ ಕುಮಾರ್, ಅಖ್ತರ್ ಹುಸೇನ್, ಅಬ್ದುಲ್ ರಶೀದ್, ಮುಬ್ಶರ್ ಅಹ್ಮದ್, ಇಟ್ವಾ, ರಾಹುಲ್ ಮತ್ತು ಕರಣ್ ಎಂದು ಗುರುತಿಸಲಾಗಿದೆ.
ಇಲ್ಲಿನ ದಂಗದೂರು ಅಣೆಕಟ್ಟು ಸಮೀಪ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾಮಗಾರಿ ಸ್ಥಳದಲ್ಲಿ ಇವೆಲ್ಲರೂ ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಎಂದಿನಂತೆ ದಚನ್ ಗ್ರಾಮದಲ್ಲಿ ಸುಮಾರು ಹತ್ತು ಮಂದಿ ಕಾರ್ಮಿಕರು ಕಾಮಗಾರಿ ಸ್ಥಳಕ್ಕೆ ಕ್ರೂಸರ್ ವಾಹನದಲ್ಲಿ ಬರುತ್ತಿದ್ದರು. ಆದರೆ, ದಂಗದೂರು ಗ್ರಾಮ ಸಮೀಪದಲ್ಲಿ 8:30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿಸಿ ರಸ್ತೆಯಿಂದ ಪಕ್ಕದ ಕಮರಿಗೆ ವಾಹನ ಉರುಳಿದೆ. ವಿಷಯ ತಿಳಿದು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಎಲ್ಲ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕಿಶ್ತ್ವಾರ್ ಉಪ ಆಯುಕ್ತ ಡಾ.ದೇವಾಂಶ್ ಯಾದವ್ ತಿಳಿಸಿದ್ದಾರೆ.
ಅಪಘಾತದ ಬಗ್ಗೆ ತಿಳಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಕಿಶ್ತ್ವಾರ್ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಟ್ಬೀಟ್ ಮಾಡಿದ್ದಾರೆ. ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸಹ, ಕಿಶ್ತ್ವಾರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.