ಅಯೋಧ್ಯೆ(ಉತ್ತರ ಪ್ರದೇಶ):ಇಂದಿನಿಂದ ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದ ಪೂರ್ವಭಾವಿ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗಲಿವೆ. ಈ ಆಚರಣೆಗಳನ್ನು ಹಿಂದೂ ಸಂಪ್ರದಾಯ, ಪದ್ಧತಿಗಳ ಪ್ರಕಾರ ನಡೆಸಲಾಗುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಉಸ್ತುವಾರಿಯಲ್ಲಿ ಎಲ್ಲ ಕಾರ್ಯಕ್ರಮಗಳು ನಡೆಯಲಿವೆ.
ಸರಯೂ ನದಿ ದಡದಲ್ಲಿ ದಶವಿಧ ಸ್ನಾನ, ವಿಷ್ಣು ಪೂಜೆ, ಗೋವು ಅರ್ಪಣಾ ಕಾರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಜನವರಿ 18ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಇರಿಸಲಾಗುತ್ತದೆ. ಜ.22ರಂದು ಮಧ್ಯಾಹ್ನ 12.20ಕ್ಕೆ ಅಭಿಜಿನ್ ಮುಹೂರ್ತದಲ್ಲಿ ವಿಗ್ರಹದ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ. ವಾರಣಾಸಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ಶುಭಮುಹೂರ್ತ ನಿಗದಿ ಮಾಡಿದ್ದಾರೆ.
ಜ.23ರಿಂದ ಸಾರ್ವಜನಿಕರಿಗೆ ದರ್ಶನ:ಶ್ರೀರಾಮನ ವಿಗ್ರಹದ ತೂಕ ಅಂದಾಜು 150ರಿಂದ 200 ಕೆ.ಜಿ ಇರಲಿದೆ ಎಂದು ವರದಿಯಾಗಿದೆ. ಪ್ರತಿಷ್ಠಾಪನಾ ವಿಧಿ ವಿಧಾನಗಳನ್ನು 121 ಆಚಾರ್ಯರು ನೆರವೇರಿಸುವರು. ಕಾಶಿಯ ಲಕ್ಷ್ಮೀಕಾಂತ್ ದೀಕ್ಷಿತ್ ಮುಖ್ಯ ಗುರುಗಳಾಗಿ ಉಪಸ್ಥಿತರಿರಲಿದ್ದಾರೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್ ತಿಳಿಸಿದ್ದಾರೆ. ಜನವರಿ 23ರಿಂದ ಭಕ್ತರು ಹಾಗು ಸಾರ್ವಜನಿಕರಿಗೆ ದೇಗುಲ ಮುಕ್ತವಾಗಲಿದೆ ಎಂದು ಅವರು ಮಾಹಿತಿ ಒದಗಿಸಿದರು.