ಪತ್ತನಂತಿಟ್ಟ(ಕೇರಳ): ದಕ್ಷಿಣ ಭಾರತದ ಪ್ರಮುಖ ತೀರ್ಥಯಾತ್ರ ಸ್ಥಳವಾದ ಶಬರಿಮಲೆಗೆ ಈ ಬಾರಿ ಭಕ್ತರ ದಂಡೇ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 20ರಷ್ಟು ಹೆಚ್ಚುವರಿ ಅಯ್ಯಪ್ಪ ಭಕ್ತರು ಶಬರಿಮಲೆಗೆ ಆಗಮಿಸಿದ್ದಾರೆ. ಮಂಡಲ ಪೂಜೆಯ ಸಂದರ್ಭದಲ್ಲಿ ಸುಮಾರು 29 ಲಕ್ಷ ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದರು.
ಈ ವರ್ಷ ಶಬರಿಮಲೆಗೆ ಹೆಚ್ಚಿನ ಭಕ್ತರೂ ಆಗಮಿಸಿರುವುದಲ್ಲದೇ ಹೆಚ್ಚಿನ ಆದಾಯವು ಹರಿದುಬಂದಿದೆ. ದೇವಾಲಯಕ್ಕೆ ಹರಿದುಬಂದ ಕಾಣಿಕೆಗಳ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಕಾಣಿಕೆಗಳ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಗಳಿಂದ ಸಂಗ್ರಹಿಸಿದ ನಾಣ್ಯಗಳ ಎಣಿಕೆ ಕಾರ್ಯ ಪೂರ್ಣಗೊಳ್ಳಲು ಹಲವು ದಿನಗಳು ಬೇಕಾಗಬಹುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
7 ಕೋಟಿ ಮೌಲ್ಯದ ನಾಣ್ಯ ಎಣಿಕೆ ಬಾಕಿ :ಸುಮಾರು 7 ಕೋಟಿಗೂ ಅಧಿಕ ಮೌಲ್ಯದ ನಾಣ್ಯಗಳ ಎಣಿಕೆ ನಡೆಯಲಿದ್ದು, ನಾಣ್ಯ ಎಣಿಕೆಗೆ ಅರವತ್ತು ಜನರನ್ನು ನಿಯೋಜಿಸಲಾಗಿದೆ. ಅಲ್ಲದೆ ನೀಲಕ್ಕಲ್ ಮತ್ತು ಪಂಬಾದ ಎರಡು ಹುಂಡಿಗಳನ್ನು ಇನ್ನೂ ತೆರೆಯಬೇಕಿದೆ. ಈ ವರ್ಷ ದೇವಾಲಯವು ಸುಮಾರು 318 ಕೋಟಿ ರೂ. ಆದಾಯ ಗಳಿಸಿದ್ದು, ಇನ್ನು ಹುಂಡಿಗಳ ಎಣಿಕೆ ಪೂರ್ಣಗೊಂಡಾಗ 330 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ 2018ರಲ್ಲಿ 260 ಕೋಟಿ ರೂ ಆದಾಯ ಗಳಿಸಿತ್ತು.
ಮಂಡಲಪೂಜೆ ಋತುವಿನಲ್ಲಿ 222 ಕೋಟಿ ಸಂಗ್ರಹ : ಈ ಬಾರಿಯ ವಾರ್ಷಿಕ ಮಂಡಲ ಪೂಜೆ ಋತುವಿನಲ್ಲಿ ಅಂದಾಜು 29 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸುಮಾರು 222.98 ಕೋಟಿ ರೂಪಾಯಿ ಕಾಣಿಕೆ ಹಣ ಸಂಗ್ರಹವಾಗಿತ್ತು.