ಬಿಜೆಪಿ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ಶೆಟ್ಟರ್ ಗುಡ್ ಬೈ ಹುಬ್ಬಳ್ಳಿ:ಪಕ್ಷದ ಮುಖಂಡರು ಟಿಕೆಟ್ ನೀಡುವ ಭರವಸೆ ನೀಡದೇ ಇರುವುದರಿಂದ ಶಾಸಕ ಸ್ಥಾನ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಬಂದಿದ್ದಾರೆ. ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿ ಮಾತನಾಡಿದ ಅವರು, ಅಧಿಕಾರ ಶಾಶ್ವತವಲ್ಲ, ನಿಮ್ಮ ಪ್ರೀತಿ, ಅಭಿಮಾನ ಶಾಶ್ವತ ಎಂದು ಹೇಳುತ್ತಾ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭಾವುಕರಾದರು.
ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಭಾನುವಾರ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರವಿದೆ. ರಾಜೀನಾಮೆ ನೀಡಿದ ನಂತರ ಎಲ್ಲವನ್ನೂ ಹೇಳುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಲ್ಲಿ ವಿಳಂಬ ಮಾಡಿದ್ದು, 3 ನೇ ಪಟ್ಟಿಯಲ್ಲಿ ಅವರ ಹೆಸರು ಬಿಡುಗಡೆಯಾಗುತ್ತೋ ಇಲ್ಲವೋ ಎಂಬ ಗೊಂದಲವಿದೆ. ಹುಬ್ಬಳ್ಳಿಯ ಶೆಟ್ಟರ್ ಅವರ ನಿವಾಸದಲ್ಲಿ ಬಿಜೆಪಿ ಕಾರ್ಯರ್ತರು, ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡಿದ್ದರು.
ಇದನ್ನೂ ಓದಿ: ಮದ್ದೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ರೈತರ ಹೆಸರಲ್ಲಿ ಜೆಡಿಎಸ್ ಅಭ್ಯರ್ಥಿ ಡಿಸಿ ತಮ್ಮಣ್ಣ ನಾಮಪತ್ರ ಸಲ್ಲಿಕೆ
ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಇಂದು ರಾತ್ರಿ ಜಗದೀಶ್ ಶೆಟ್ಟರ್ ಮನವೊಲಿಸುವ ಪ್ರಯತ್ನ ನಡೆಸಿದರು. ಆದರೆ, ಸಂಧಾನ ಸಭೆ ವಿಫಲವಾಗಿದ್ದು, ಇದೀಗ ಜಗದೀಶ್ ಶೆಟ್ಟರ್ ಅಂತಿಮವಾಗಿ ಬಿಜೆಪಿಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಹೈಕಮಾಂಡ್ ನಾಯಕರ ಜೊತೆ ಮಾತುಕತೆ ವಿಫಲವಾದ ಬಳಿಕ ಮಾತನಾಡಿದ ಮುಂದೆ ನಮ್ಮ ಹಿತೈಷಿಗಳ ಸಭೆ ಮಾಡ್ತೇನೆ. ರಾಜೀನಾಮೆ ನಂತರ ಮುಂದಿನ ನಡೆ ನಿರ್ಧರಿಸ್ತೇನೆ ಎಂದು ಜಗದೀಶ ಶೆಟ್ಟರ್ ಹೇಳಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೀತಿದೆ. ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ. ಈಗ ಉಳಿದ ಸೀನಿಯರ್ ಲೀಡರ್ ಗಳಲ್ಲಿ ನಾನೇ ಸೀನಿಯರ್, ಹಾಗಾಗಿ ಉನ್ನತ ಹುದ್ದೆ ಆಕಾಂಕ್ಷಿಯಾಗಬಹುದೆಂದು ಹುನ್ನಾರ ನಡೆಸಿರಬಹುದು ಎನಿಸುತ್ತಿದೆ. ನಾನು ಇಂದೂ ಈ ಬಗ್ಗೆ ಹೇಳಿದೆ, ಬರೀ ಶಾಸಕನಾಗಿ ಉಳೀತೇನೆ ಅಂದೆ ಆದ್ರೂ ಕೇಳಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ್ರೆ ಶೆಟ್ಟರ್ ಸಿಎಂ ರೇಸ್ ಗೆ ಬರ್ತಾರೆ ಅನ್ನೋ ಭಯವಿದೆ. ಹಾಗಾಗಿ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅವರು, ಸ್ಪರ್ಧೆ ಮಾಡೋದು ನಿಶ್ಚಿತ, ಈ ಬಗ್ಗೆ ಪ್ರಮುಖರ ಅಭಿಪ್ರಾಯ ತೆಗೆದುಕೊಂಡು ಮುಂದಿನ ನಿರ್ಧಾರ ಪ್ರಕಟಿಸುತ್ತೇನೆ. ಷಡ್ಯಂತ್ರಕ್ಕೆ ಚುನಾವಣೆಯಲ್ಲಿ ಉತ್ತರ ಕೊಡ್ತೇನೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಬಹಿರಂಗಪಡಿಸ್ತೇನೆ ಎಂದು ಖಡಕ್ ಸಂದೇಶವನ್ನು ಬಿಜೆಪಿಗೆ ರವಾನಿಸಿದರು.
ಇದನ್ನು ಓದಿ:ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು