ನವದೆಹಲಿ:ಛತ್ತೀಸ್‌ಗಢದಲ್ಲಿ 2013ರಲ್ಲಿ ನಡೆದ ನಕ್ಸಲರ ದಾಳಿ ಪ್ರಕರಣದಲ್ಲಿ ರಾಜಕೀಯ ಪಿತೂರಿಗೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ತನಿಖೆಯನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
2013ರಲ್ಲಿ ಜೀರಾಮ್ ಘಾಟಿಯಲ್ಲಿ ನಕ್ಸಲರ ದಾಳಿಯಲ್ಲಿ ಕಾಂಗ್ರೆಸ್ ನಾಯಕರು ಸೇರಿದಂತೆ 27 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯನ್ನು ಎನ್‌ಐಎ ನಡೆಸಿದ್ದು, ಇದರ ವಿಚಾರಣೆ ಮುಂದುವರೆದಿದೆ. ಈ ನಡುವೆ 2020ರಲ್ಲಿ ಮೃತ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ, ಈ ಘಟನೆಯಲ್ಲಿ ದೊಡ್ಡ ರಾಜಕೀಯ ಪಿತೂರಿ ಕುರಿತು ತನಿಖೆ ಮಾಡುವಲ್ಲಿ ಎನ್‌ಐಎ ವಿಫಲವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ರಾಜ್ಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮತ್ತೊಂದೆಡೆ, ರಾಜ್ಯ ಪೊಲೀಸರ ಎಫ್ಐಆರ್ ತನ್ನ ತನಿಖೆಗೆ ಸಂಬಂಧಿಸಿರುವುದರಿಂದ ಆ ಎಫ್ಐಆರ್ ಅನ್ನು ತನಗೆ ವರ್ಗಾಯಿಸುವಂತೆ ಎನ್ಐಎ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಆದರೆ, ವಿಚಾರಣಾ ನ್ಯಾಯಾಲಯ ಹಾಗೂ ಛತ್ತೀಸ್‌ಗಢದ ಹೈಕೋರ್ಟ್ ಎನ್‌ಐಎ ಅರ್ಜಿಯನ್ನು ತಿರಸ್ಕರಿಸಿದ್ದವು. ಬಳಿಕ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಆರಂಭದಲ್ಲಿ ಸುಪ್ರೀಂ ಕೋರ್ಟ್, ರಾಜ್ಯ ಪೊಲೀಸರ ಮುಂದಿನ ತನಿಖೆಗೆ ತಡೆಯಾಜ್ಞೆ ನೀಡಿತ್ತು.
ಇಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಿತು. ಎನ್‌ಐಎ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ವಾದ ಮಂಡಿಸಿದರು. ಅಪರಾಧದ ಹಿಂದಿನ ಪಿತೂರಿಯನ್ನು ಎನ್‌ಐಎ ತನಿಖೆ ಮಾಡುತ್ತಿಲ್ಲ ಎಂಬುದು ದೂರುದಾರರ ಆರೋಪವಾಗಿದೆ. ಈ ಘಟನೆ ನಡೆದ 7 ವರ್ಷಗಳ ನಂತರ ದೂರುದಾರರು ದೊಡ್ಡ ಪಿತೂರಿ ನಡೆದಿದೆ ಎಂದು ಹೇಳಿದ್ದಾರೆ. ಎನ್‌ಐಎ 2014ರಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಪಿತೂರಿ ಕುರಿತು ಎನ್‌ಐಎ ತನಿಖೆ ಮಾಡದಿದ್ದರೆ, ನೀವು ಹೆಚ್ಚಿನ ತನಿಖೆಗೆ ಒತ್ತಾಯಿಸಿ, ಮತ್ತೊಂದು ಎಫ್‌ಐಆರ್ ದಾಖಲಿಸಬೇಡಿ ಎಂದು ರಾಜು ಹೇಳಿದರು.
ಛತ್ತೀಸ್‌ಗಢ ಸರ್ಕಾರವನ್ನು ಪ್ರತಿನಿಧಿಸುವ ಹಿರಿಯ ವಕೀಲ ಎಎನ್‌ಎಸ್ ನಾಡಕರ್ಣಿ ಮತ್ತು ವಕೀಲ ಸುಮೀರ್ ಸೋಧಿ, 2013ರಿಂದ ಎನ್‌ಐಎ ರಾಜಕೀಯ ಪಿತೂರಿಯ ಆಯಾಮವನ್ನು ಎಂದಿಗೂ ತನಿಖೆ ಮಾಡಿಲ್ಲ. ವಾಸ್ತವವಾಗಿ ಪ್ರಕರಣವನ್ನು ಎನ್‌ಐಎ ಮುಕ್ತಾಯಗೊಳಿಸಿದೆ ಎಂದು ವಾದಿಸಿದರು. ಅಲ್ಲದೇ, 2016ರಲ್ಲಿ ಅಂದಿನ ಆಡಳಿತವು ಎನ್‌ಐಎ ತನ್ನ ಕೆಲಸ ಮಾಡದ ಕಾರಣ ಸಿಬಿಐ ತನಿಖೆ ಆರಂಭಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿತ್ತು ಎಂದೂ ವಕೀಲರು ನ್ಯಾಯ ಪೀಠದ ಗಮನಕ್ಕೆ ತಂದರು.
ಸುದೀರ್ಘವಾಗಿ ವಾದ ಮತ್ತು ಪ್ರತಿವಾದ ಆಲಿಸಿದ ನಂತರ ನ್ಯಾಯ ಪೀಠವು, ಎನ್‌ಐಎ ಸಲ್ಲಿಸಿದ್ದ ವಿಶೇಷ ರಜಾ ಕಾಲದ ಅರ್ಜಿಯನ್ನು ವಜಾಗೊಳಿಸಿ , ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಇದರಿಂದ ರಾಜ್ಯ ಪೊಲೀಸರು 2013ರ ಭೀಕರ ದಾಳಿಯಲ್ಲಿನ ರಾಜಕೀಯ ಪಿತೂರಿಯ ಆಯಾಮ ಕುರಿತು ತನಿಖೆ ಮುಂದುವರೆಸಬಹುದಾಗಿದೆ.
ಇದನ್ನೂ ಓದಿ:ಕೌಶಲಾಭಿವೃದ್ಧಿ ಹಗರಣ: ಚಂದ್ರಬಾಬುಗೆ ಜಾಮೀನು ಪ್ರಶ್ನಿಸಿ ಸುಪ್ರೀಂಗೆ ಆಂಧ್ರ ಸರ್ಕಾರದ ಅರ್ಜಿ