ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮಾಜಿ ಶಾಸಕ, ಉದ್ಯಮಿ ಕೋಮಟಿ ರೆಡ್ಡಿ ರಾಜಗೋಪಾಲ್ ರೆಡ್ಡಿ ಶಾಕ್ ನೀಡಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅವರು, ಈಗ ಮತ್ತೆ ಕೈ ಹಿಡಿಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಸರಿ ಪಕ್ಷಕ್ಕೆ ಬುಧವಾರ ರಾಜೀನಾಮೆಯನ್ನೂ ಘೋಷಿಸಿದ್ದಾರೆ.
ನೆಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಕಾಂಗ್ರೆಸ್ನ ಹಾಲಿ ಶಾಸಕರಾಗಿದ್ದ ರಾಜಗೋಪಾಲ್ ರೆಡ್ಡಿ ಕಳೆದ ವರ್ಷದ ಆಗಸ್ಟ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಇದರಿಂದ ಮುನಗೋಡು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಆದರೆ, ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದ ಅವರು, ಆಡಳಿತರೂಢ ಬಿಆರ್ಎಸ್ ಪಕ್ಷದ ಅಭ್ಯರ್ಥಿ ಎದುರು ಸೋಲು ಕಂಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಗೂಡಿಗೆ ಮರಳಲು ಅವರು ನಿರ್ಧರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಬಹಿರಂಗವಾಗಿ ಅವರೇ ಪ್ರಕಟಿಸಿದ್ದಾರೆ. ''ರಾಜ್ಯದಲ್ಲಿ ಬಿಆರ್ಎಸ್ ಆಡಳಿತವನ್ನು ಜನತೆ ತಿರಸ್ಕರಿಸುತ್ತಿದ್ದಾರೆ. ಇದು ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ. ಕೆಸಿಆರ್ ಕುಟುಂಬದಿಂದ ತೆಲಂಗಾಣವನ್ನು ಮುಕ್ತ ಮಾಡಬೇಕಿದೆ. ಮುಂದಿನ ಐದು ವರ್ಷಗಳಲ್ಲಿ ಜನತೆಯ ಆಶಯ ಈಡೇರಲಿದೆ. ದೇಶಕ್ಕೆ ಕಾಂಗ್ರೆಸ್ ಪಕ್ಷವೇ ಪರ್ಯಾಯ ಎಂದು ಜನತೆ ನಿರ್ಧರಿಸಿದ್ದಾರೆ'' ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.