ಚಂಡೀಗಢ(ಪಂಜಾಬ್): ಆಪ್ ಪಕ್ಷ ಪಂಜಾಬ್ನಲ್ಲಿ ಅಧಿಕಾರ ಹಿಡಿದಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸ ಕನಸುಗಳನ್ನು ಜನರು ಹೊತ್ತಿದ್ದಾರೆ. ನೂತನ ಸಿಎಂ ಆಗಿರುವ ಭಗವಂತ್ ಮಾನ್ ಅವರು ಭ್ರಷ್ಟಾಚಾರ ನಿಗ್ರಹಕ್ಕೆ ಪಣ ತೊಟ್ಟು ತಮ್ಮ ವಾಟ್ಸ್ಆ್ಯಪ್ ಸಂಖ್ಯೆಯನ್ನು ಜನರೊಂದಿಗೆ ಹಂಚಿಕೊಂಡು ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಪಂಜಾಬ್ ಸರ್ಕಾರ ಅಧಿಕಾರವನ್ನು ಹಿಡಿದು ಕೆಲವೇ ದಿನಗಳ ಕಳೆದಿದ್ದು, ಕೇಂದ್ರ ಸರ್ಕಾರದ ಬಿಸಿಯನ್ನು ಎದುರಿಸಬೇಕಾಗಿದೆ.
ಹೌದು, ಪಂಜಾಬ್‌ನ ರಾಜಧಾನಿ ಚಂಡೀಗಢ ಕೇಂದ್ರಾಡಳಿತ ಪ್ರದೇಶವೂ ಆಗಿದ್ದು, ಕೇಂದ್ರ ಸರ್ಕಾರವೂ ಸಾಕಷ್ಟು ಹಿಡಿತವನ್ನು ಚಂಡೀಗಢದ ಮೇಲೆ ಹೊಂದಿದೆ. ಈಗ ಚಂಡೀಗಢದ ಸರ್ಕಾರಿ ನೌಕರರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯೊಂದು, ಪಂಜಾಬ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ರಾಜಕೀಯ ಮತ್ತು ಆಡಳಿತಾತ್ಮಕ ತಿಕ್ಕಾಟಗಳಿಗೆ ಕಾರಣವಾಗಿದೆ.
ಏಪ್ರಿಲ್ 1ರಿಂದ ಚಂಡೀಗಢದ ಸರ್ಕಾರಿ ನೌಕರರು ಕೇಂದ್ರ ಸೇವಾ ನಿಯಮಗಳ ವ್ಯಾಪ್ತಿಗೆ ಬರುತ್ತಾರೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಕೇಂದ್ರದ ಅಡಿ ನೌಕರರು ಬರುವ ಕಾರಣದಿಂದ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 58 ವರ್ಷದಿಂದ 60 ವರ್ಷಕ್ಕೆ ಹೆಚ್ಚಾಗುತ್ತದೆ. ಶಿಕ್ಷಣ ಇಲಾಖೆಯ ನೌಕರರ ನಿವೃತ್ತಿ ವಯಸ್ಸು ಕೂಡಾ 65 ವರ್ಷವಾಗುತ್ತದೆ. ಸರ್ಕಾರಿ ನೌಕರರು ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಹರಾಗಿರುತ್ತಾರೆ ಎಂದು ಅಮಿತ್ ಶಾ ಅವರು ಹೇಳಿದ್ದಾರೆ.
ಪಂಜಾಬ್ ಸರ್ಕಾರದ ವಿರೋಧ:ಅಮಿತ್ ಶಾ ಅವರ ಈ ನಿರ್ಧಾರವನ್ನು ಪಂಜಾಬ್‌ನ ಭಗವಂತ್ ಮಾನ್ ಸರ್ಕಾರ ವಿರೋಧಿಸಿದೆ. ಅಮಿತ್ ಶಾ ಅವರ ನಿರ್ಧಾರ ಪಂಜಾಬ್ ನೋಂದಣಿ ಕಾಯಿದೆ-1966ರ ವಿರುದ್ಧವಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಚಂಡೀಗಢದ ಮೇಲಿನ ಪಂಜಾಬ್‌ನ ಹಕ್ಕಿಗಾಗಿ ತಮ್ಮ ಸರ್ಕಾರವು ಹೋರಾಟವನ್ನು ಮುಂದುವರೆಸುತ್ತದೆ ಎಂದು ಭಗವಂತ್ ಮಾನ್ ಸ್ಪಷ್ಟನೆ ನೀಡಿದ್ದಾರೆ. ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಶಾಸಕ ಸುಖ್ಜೀಂದರ್ ರಾಂಧವಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಕೇಂದ್ರ ಸರ್ಕಾರ ಚಂಡೀಗಢದ ಮೇಲೆ ಪಂಜಾಬ್‌ನ ಹಕ್ಕನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.