ಗುಜರಾತ್: ಅಹಮದಾಬಾದ್‌ನ ಬಾವ್ಲಾ-ಬಗೋದ್ರಾ ಹೆದ್ದಾರಿಯಲ್ಲಿ ಕಳೆದ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿತು. ಕನಿಷ್ಠ 10 ಜನರು ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ. ಲಾರಿಯ ಹಿಂಬದಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದು ಘಟನೆ ನಡೆದಿದೆ.
ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅಹಮದಾಬಾದ್ ಜಿಲ್ಲಾ ಎಸ್ಪಿ ಅಮಿತ್ ಕುಮಾರ್ ವಾಸವ, ''ರೈತ ಕುಟುಂಬವೊಂದು ದೇವರ ದರ್ಶನ ಮುಗಿಸಿ ಮಿನಿ ಟ್ರಕ್‌ನಲ್ಲಿ ಕಳೆದ ರಾತ್ರಿ 12 ಗಂಟೆ ಸುಮಾರಿಗೆ ತಮ್ಮ ಗ್ರಾಮದತ್ತ ಹಿಂದಿರುಗುತ್ತಿತ್ತು. ಈ ವೇಳೆ ರಸ್ತೆ ಬಳಿ ನಿಂತಿದ್ದ ಲಾರಿಯೊಂದಕ್ಕೆ ಟ್ರಕ್ ಹಿಂದಿನಿಂದ ಬಂದು ಡಿಕ್ಕಿ ಹೊಡೆಯಿತು. ಪರಿಣಾಮ, 10 ಜನ ಸ್ಥಳದಲ್ಲೇ ಮೃತಪಟ್ಟರು. ಮೃತರಲ್ಲಿ ಐವರು ಮಹಿಳೆಯರು, ಮೂವರು ಮಕ್ಕಳು ಮತ್ತು ಇಬ್ಬರು ಪುರುಷರಿದ್ದಾರೆ. ಮೃತಪಟ್ಟ 10 ಜನರಲ್ಲಿ 9 ಮಂದಿ ಒಂದೇ ಕುಟುಂಬದವರೆಂಬ ಮಾಹಿತಿ ಇದೆ. ಗಾಯಾಳುಗಳನ್ನು ಬಾಗೋದರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇತರ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ" ಎಂದರು.
ಪರಿಹಾರ ಘೋಷಣೆ:ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ''ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ತಲಾ 50,000 ರೂ. ನೀಡಲಾಗುವುದು'' ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಅಹಮದಾಬಾದ್ ರೇಂಜ್‌ನ ಇನ್ಸ್‌ಪೆಕ್ಟರ್ ಜನರಲ್ ಪ್ರೇಮ್ ವೀರ್ ಸಿಂಗ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದರು. ''ಸುಮಾರು 23 ಜನರನ್ನು ಕರೆದೊಯ್ಯುತ್ತಿದ್ದ ಮಿನಿ ಟ್ರಕ್ನ ಟೈರ್ ಪಂಕ್ಚರ್ ಆಗಿದೆ. ಪರಿಣಾಮ, ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಡಿಕ್ಕಿಯಿಂದ ಮೂವರು ಮಕ್ಕಳು ಸೇರಿದಂತೆ 10 ಜನರು ಸ್ಥಳದಲ್ಲೇ ಮೃತಪಟ್ಟರು. ಮೃತರು ಮತ್ತು ಗಾಯಾಳುಗಳು ಖೇಡಾ ಜಿಲ್ಲೆಯ ಕಪಾಡ್ವಂಜ್ ತಾಲೂಕಿನವರು. ಸುರೇಂದ್ರನಗರದ ಚೋಟಿಲಾ ಪಟ್ಟಣದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ದುರಂತ ಸಂಭವಿಸಿದೆ'' ಎಂದು ತಿಳಿಸಿದರು.
"ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಹಿಟ್ ಆ್ಯಂಡ್ ರನ್:ಅಹಮದಾಬಾದ್ನಲ್ಲಿ ಗುರುವಾರ ಮಧ್ಯರಾತ್ರಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಎಲಿಜ್‌ಬ್ರಿಡ್ಜ್‌ನಲ್ಲಿ ಪ್ರಯಾಣಿಸುತ್ತಿದ್ದ ಬೈಕ್ಗೆ ಅಪರಿಚಿತ ವಾಹನ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ಜಮಾಲ್‌ಪುರದ ಸಾಹಿಲ್ ಅಜ್ಮೇರಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ತಿರುವಿನಲ್ಲಿ ಸೋಲಾರ್ ಪ್ಲೇಟ್ ತುಂಬಿದ್ಧ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಜಸ್ಟ್ ಮಿಸ್