ನವದೆಹಲಿ:ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಸಾವಿರಾರು ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಅವರಿಗೆ ಬೆಡ್ ಹಾಗೂ ಆಕ್ಸಿಜನ್ ಕೊರತೆ ಉಂಟಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಆಸ್ಪತ್ರೆಗಳಲ್ಲಿ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದ್ದು, ಟ್ವೀಟ್ ಮಾಡುವ ಮೂಲಕ ಕೇಜ್ರಿವಾಲ್ ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ಆಮ್ಲಜನಕ ಬಿಕ್ಕಟ್ಟು ಉಂಟಾಗಿದೆ ಎಂದು ಅವರು ಟ್ವೀಟ್ ಮಾಡಿದ್ದು, ತಕ್ಷಣವೇ ಆಕ್ಸಿಜನ್ ಒದಗಿಸುವಂತೆ ಕೇಂದ್ರದ ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಲಾಕ್ಡೌನ್ ಬೇಡವೇ ಬೇಡ: ದೇಶವನ್ನ ಲಾಕ್ಡೌನ್ನಿಂದ ರಕ್ಷಿಸುವಂತೆ ನಮೋ ಮನವಿ
ಕೆಲವೊಂದು ಆಸ್ಪತ್ರೆಗಳಲ್ಲಿ ಕೆಲವೇ ಗಂಟೆಗಳ ಆಕ್ಸಿಜನ್ ಉಳಿದುಕೊಂಡಿದ್ದು, ತಕ್ಷಣವೇ ನಮಗೆ ಆಕ್ಸಿಜನ್ ಒದಗಿಸುವಂತೆ ಕೇಂದ್ರದ ಬಳಿ ಒತ್ತಾಯಿಸುತ್ತಿರುವುದಾಗಿ ಅವರು ಮನವಿ ಮಾಡಿಕೊಂಡಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಡಿಸಿಎಂ ಮನೀಷ್ ಸಿಸೋಡಿಯಾ, ಆಮ್ಲಜನಕ ಕೊರತೆ ವಿಚಾರವಾಗಿ ಎಲ್ಲ ಆಸ್ಪತ್ರೆಗಳಿಂದ ಫೋನ್ ಕರೆ ಬರುತ್ತಿದ್ದು, ವಿವಿಧ ರಾಜ್ಯಗಳಿಂದ ಸರಬರಾಜು ಸ್ಥಗಿತಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಕೆಲವೊಂದು ಆಸ್ಪತ್ರೆಗಳಲ್ಲಿ ಮುಂದಿನ 8 ರಿಂದ 12 ಗಂಟೆಗಳವರೆಗೆ ಮಾತ್ರ ಆಮ್ಲಜನಕ ಲಭ್ಯವಿದ್ದು, ಕಳೆದ ಒಂದು ವಾರದಿಂದ ಇದರ ಪೂರೈಕೆಗೆ ನಾವು ಒತ್ತಾಯಿಸುತ್ತಿದ್ದೇನೆ ಎಂದಿದ್ದಾರೆ. ನಾಳೆ ಬೆಳಗ್ಗೆವರೆಗೆ ಸಾಕಷ್ಟು ಆಸ್ಪತ್ರೆಗಳಿಗೆ ಆಮ್ಲಜನಕ ತಲುಪದಿದ್ದರೆ ಆಕ್ರೋಶ ಉಂಟಾಗಲಿದೆ ಎಂದಿದ್ದಾರೆ.