ಡೆಹ್ರಾಡೂನ್ (ಉತ್ತರಾಖಂಡ): ಹರಿದ್ವಾರದ ಮಹಾಕುಂಭಮೇಳ ಸಂದರ್ಭದಲ್ಲಿ ನಡೆದಿರುವ ಕೋವಿಡ್ ಪರೀಕ್ಷಾ ಹಗರಣವು ಒಂದು ಗಂಭೀರ ಅಪರಾಧವಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಆಗ್ರಹಿಸಿದ್ದಾರೆ.
ಇದೊಂದು ಆರ್ಥಿಕ ಅಪರಾಧವಾಗಿದೆ. ಮಹಾಕುಂಭಮೇಳದ ಸಂದರ್ಭದಲ್ಲಿ ದೆಹಲಿ ಮತ್ತು ಹರಿಯಾಣದ ಲ್ಯಾಬ್ಗಳಲ್ಲಿ ಕೊರೊನಾ ಟೆಸ್ಟ್ ಮಾಡಿಸಲಾಯಿತು. ಇದರಲ್ಲಿ ಹಗರಣ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ಕೋವಿಡ್ ತಪಾಸಣಾ ಕೇಂದ್ರಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಉತ್ತರಾಖಂಡ ಸರ್ಕಾರ ಹರಿದ್ವಾರ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಕುಂಭಮೇಳ ಸಂದರ್ಭದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಕನಿಷ್ಠ 1 ಲಕ್ಷ ವರದಿಗಳು ನಕಲಿ ಎಂದು ತಿಳಿದು ಬಂದಿದೆ. ಮಹಾ ಕುಂಭಮೇಳವು ಹರಿದ್ವಾರ ಮತ್ತು ಋಷಿಕೇಶದಲ್ಲಿ 2021 ರ ಏಪ್ರಿಲ್ 1 ರಿಂದ 30 ರವರೆಗೆ ನಡೆಯಿತು. ಇದರಲ್ಲಿ ಡೆಹ್ರಾಡೂನ್ ಜಿಲ್ಲೆಯ ಋಷಿಕೇಶ, ತೆಹ್ರಿಯ ಮುನಿ ಕಿರೆತಿ ಮತ್ತು ಪೌರಿಯ ಸ್ವರ್ಗಾಶ್ರಮ ಸೇರಿವೆ.
ಕೋವಿಡ್ ಲಸಿಕೆ ಪಡೆಯಲು ಜನತೆ ಹಿಂದೇಟು ಹಾಕುತ್ತಿರುವ ಬಗ್ಗೆ ಮಾತನಾಡಿದ ಮಾಜಿ ಸಿಎಂ, ಕೋವಿಡ್ ಲಸಿಕೆ ಹಾನಿಕಾರಕವಲ್ಲ ಎಂದು ಸಾಬೀತಾಗಿದೆ. ಆದರೂ ಕೆಲವರು ಮೂಢನಂಬಿಕೆ ಮತ್ತು ವದಂತಿ ಸುದ್ದಿಗಳಿಗೆ ಕಿವಿಗೊಡುತ್ತಿರುವುದರಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ವ್ಯಾಕ್ಸಿನ್ ಬಗ್ಗೆ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು.
ಮುಸ್ಲಿಂ ಸಮುದಾಯದಲ್ಲಿ ಕೆಲವರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಳ್ಳುತ್ತಿದ್ದಾರೆ. ಸಮಾಜದ ಸಾಮಾಜಿಕ ಕಾರ್ಯಕರ್ತರು ಅವರಲ್ಲಿ ಲಸಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ರಾವತ್ ಹೇಳಿದ್ದಾರೆ.