ಕರ್ನಾಟಕ

karnataka

50 ವರ್ಷಗಳ ನಿರಂತರ ಶ್ರಮ.. 75 ಸಾವಿರ ಬೆಂಕಿ ಕಡ್ಡಿಗಳಿಂದ ನಿರ್ಮಾಣವಾದ 'ಐಫೆಲ್ ಟವರ್' ಪ್ರತಿಕೃತಿ

By

Published : Feb 28, 2023, 2:05 PM IST

ಮೀರತ್ ಮೂಲದ ಸುರೇಂದ್ರ ಜೈನ್ ಎಂಬುವವರು 75 ಸಾವಿರ ಬೆಂಕಿಕಡ್ಡಿಗಳಿಂದ 5 ಅಡಿ ಎತ್ತರದ ಐಫೆಲ್ ಟವರ್ ಪ್ರತಿಕೃತಿ ನಿರ್ಮಿಸಿದ್ದಾರೆ. 50 ವರ್ಷಗಳ ಕಠಿಣ ಪರಿಶ್ರಮದ ಇವರ ಸಾಧನೆಗೆ ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳು ಅಡ್ಡಿಯಾಗಲಿಲ್ಲ.

Eiffel Tower
ಬೆಂಕಿಕಡ್ಡಿಗಳಿಂದ ನಿರ್ಮಾಣವಾದ ಐಫೆಲ್ ಟವರ್ ಪ್ರತಿಕೃತಿ

ಮೀರತ್ (ಉತ್ತರ ಪ್ರದೇಶ):ಗುರಿ ಸಾಧಿಸುವ ಅಚಲ ನಂಬಿಕೆಯಿದ್ದಾಗ ಮಾತ್ರ ಯಶಸ್ಸು ಸಾಧ್ಯ. ಇದಕ್ಕೆ ಉತ್ತರ ಪ್ರದೇಶದ ಮೀರತ್ ಜಿಲ್ಲೆ ಸುರೇಂದ್ರ ಜೈನ್ ಉತ್ತಮ ಉದಾಹರಣೆ. ಬರೋಬ್ಬರಿ 50 ವರ್ಷಗಳ ನಿರಂತರ ಪರಿಶ್ರಮದಿಂದ ತಮ್ಮ ಕಲೆಯನ್ನು ಪರಿಪೂರ್ಣಗೊಳಿಸಿದ್ದಾರೆ. 75 ಸಾವಿರ ಬೆಂಕಿ ಕಡ್ಡಿಗಳಿಂದ 5 ಅಡಿ ಎತ್ತರದ 'ಐಫೆಲ್ ಟವರ್ ಪ್ರತಿಕೃತಿ' ನಿರ್ಮಿಸಿ ದಾಖಲೆ ಬರೆದಿದ್ದಾರೆ.

ಬಾಲ್ಯದಿಂದಲ್ಲೇ ಇವರಿಗೆ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಆಕರ್ಷಿಸಿತು. ತನ್ನ ಕನಸು ನನಸು ಮಾಡಲು ಸುರೇಂದ್ರ ಅವರು 2013 ರಲ್ಲಿ ಪ್ಯಾರಿಸ್‌ಗೆ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಅವರು ಎರಡು ದಿನಗಳ ಕಾಲ ಗೋಪುರದ ತಳದಲ್ಲಿ ಕುಳಿತು ವಾಸ್ತುಶಿಲ್ಪದ ಅದ್ಭುತವನ್ನು ವೀಕ್ಷಿಸಿದರು. ಬಳಿಕ ಗೋಪುರದ ಸಂಕೀರ್ಣ ವಿವರಗಳನ್ನು ಅಧ್ಯಯನ ಮಾಡಿದರು.

ಪ್ಯಾರಿಸ್​​ಗೆ ಭೇಟಿ ನೀಡಿದ ಒಂದು ದಶಕದ ನಂತರ 75 ಸಾವಿರ ಬೆಂಕಿಕಡ್ಡಿಗಳನ್ನು ಬಳಸಿ ಐಫೆಲ್ ಟವರ್ ಪ್ರತಿಕೃತಿಯನ್ನು ರಚಿಸುವಲ್ಲಿ ಅವರು ಯಶಸ್ವಿಯಾಗಿದ್ಧಾರೆ. ಉತ್ತರ ಪ್ರದೇಶದ ಮೀರತ್ ನಗರದ ಪರ್ತಾಪುರ್ ಪ್ರದೇಶದ ನಿವಾಸಿಯಾದ ಸುರೇಂದ್ರ ವೃತ್ತಿಯಲ್ಲಿ ವ್ಯಾಪಾರಿ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, "ನಾನು ನನ್ನ ಅಧ್ಯಯನವನ್ನು ಮುಂದುವರಿಸಿದಾಗ, ನನ್ನ ತಾಯಿ ಯಾವಾಗಲೂ ವಿಭಿನ್ನವಾಗಿ ಏನಾದರೂ ಮಾಡಲು ಸಲಹೆ ನೀಡುತ್ತಿದ್ದರು.

7 ಅದ್ಭುತಗಳಲ್ಲಿ, ಐಫೆಲ್ ಟವರ್‌ನ ಆಕರ್ಷಣೆ ನನ್ನ ಮನಸ್ಸಿನಲ್ಲಿ ಸದಾ ಕಾಲ ಇತ್ತು. 2013 ರಲ್ಲಿ ನಾನು ಪ್ಯಾರಿಸ್‌ಗೆ ಪ್ರವಾಸ ಕೈಗೊಂಡಿದ್ದೆ. ಇಂಜಿನಿಯರಿಂಗ್ ಅದ್ಭುತದ ಅನುಭವವನ್ನು ಪಡೆಯಲು ನಾನು ಗೋಪುರವನ್ನು, ಅದರ ವಿನ್ಯಾಸ ಮತ್ತು ವಾಸ್ತುಶಿಲ್ಪ ಅರ್ಥಮಾಡಿಕೊಳ್ಳಲು ಎರಡು ದಿನಗಳ ಕಾಲ ವೀಕ್ಷಿಸಿದೆ" ಎಂದು ಹೇಳಿದರು.

ಕಾರ್ಯವು ಸವಾಲಿನದ್ದಾಗಿತ್ತು..: 2019ರಲ್ಲಿ ಆರೋಗ್ಯ ಸಮಸ್ಯೆ ಎದುರಾಯಿತು. ಆದರೂ ಅದನ್ನೂ ನಿವಾರಿಸಿಕೊಂಡು ತಮ್ಮ ಕೆಲಸದ ಮೇಲೆ ಸಂಪೂರ್ಣ ಗಮನ ಹರಿಸಿದರು. ವಯೋಸಹಜ ಕಾಯಿಲೆಯಿಂದ ಕೆಲಸ ಮಾಡುವಾಗ ಅವರ ಕೈಗಳು ನಡುಗುತ್ತಿದ್ದವು. ಕೈ ನಡುಕ ಕಡಿಮೆ ಮಾಡಲು ಯೋಗ ಮಾಡಿರುವುದಾಗಿ ಸುರೇಂದ್ರ ಅವರು ಹೇಳಿಕೊಂಡಿದ್ದಾರೆ. ಈ ಪ್ರತಿಕೃತಿ ತಯಾರಿಕೆ ವಿವರಗಳನ್ನು ತಿಳಿಸುತ್ತಾ ಸುರೇಂದ್ರ ಅವರು ಈ ಕಾರ್ಯ ಸವಾಲಿನದ್ದಾಗಿತ್ತು ಎಂದು ಹೇಳಿದರು.

"ಪ್ರತಿಕೃತಿಯನ್ನು ನಿರ್ಮಿಸಲು ಒಟ್ಟು 75 ಸಾವಿರ ಬೆಂಕಿಕಡ್ಡಿಗಳನ್ನು ಬಳಸಲಾಗಿದೆ. ನಾನು ಮಾದರಿಯನ್ನು ಗಾಳಿ ಮತ್ತು ಧೂಳಿನ ವಾತಾವರಣದಿಂದ ರಕ್ಷಿಸಬೇಕಾಗಿತ್ತು. ಬೆಂಕಿಕಡ್ಡಿಗಳ ನಡುವೆ ಪರಿಪೂರ್ಣವಾದ ಬಂಧವನ್ನು ಖಚಿತಪಡಿಸಿಕೊಳ್ಳಲು ಅಂಟುಗಳನ್ನು ಬಳಸುವುದು ಸ್ವಲ್ಪ ಸವಾಲಿನ ಸಂಗತಿಯಾಗಿದೆ. ಯೋಜನೆಯ ಕಾರ್ಯಗತಗೊಳಿಸಲು ಪ್ರತ್ಯೇಕ ಕೊಠಡಿ ನಿರ್ಮಿಸಿಕೊಂಡಿದ್ದೆ ಎಂದು ಅವರು ವಿವರಿಸಿದರು.

ಮೊದಲ ಮಾದರಿ?:'ಮೂಲ ಐಫೆಲ್ ಟವರ್ 1,100 ಅಡಿ ಎತ್ತರವಿದೆ. ನಾನು ತಯಾರಿಸಿದ ಪ್ರತಿಕೃತಿ ಐದು ಅಡಿ ಎತ್ತರವಿದೆ. ಇದು ಸುದೀರ್ಘವಾದ ಕೆಲಸ. ಗೋಪುರದ ತಳಹದಿಯ ನಿರ್ಮಾಣವು ಅತ್ಯಂತ ಸವಾಲಿನದ್ದಾಗಿತ್ತು. ಇದು ಬಹುಶಃ ದೇಶದಲ್ಲಿ ಈ ರೀತಿಯ ಮೊದಲ ಮಾದರಿಯಾಗಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ನನ್ನ ಸಾಧನೆಯನ್ನು ನೋಂದಾಯಿಸಲು ನಾನು ಬಯಸುತ್ತೇನೆ' ಎಂದು ಸುರೇಂದ್ರ ಹೇಳಿದರು.

ಇದನ್ನೂ ಓದಿ:ಬೈರುತ್​ ಸ್ಫೋಟದಲ್ಲಿ ಮಡಿದವರಿಗೆ ಸಂತಾಪ: ಐಫೆಲ್ ಟವರ್​ನ ದೀಪಗಳನ್ನು ಆರಿಸಿದ ಫ್ರಾನ್ಸ್​

ABOUT THE AUTHOR

...view details