ತಮಿಳುನಾಡು/ಕೇರಳ:ತಮಿಳುನಾಡಿನಅರಕ್ಕೋಣಂನ ಕೀಲವೀತಿ ಗ್ರಾಮದಲ್ಲಿ ದ್ರೌಪದಿ ಅಮ್ಮನ್ ಮತ್ತು ಮೊಂಡಿ ಅಮ್ಮನವರ ಪುರಾತನ ದೇವಾಲಯಗಳಿವೆ. ಈ ದೇವಾಲಯಗಳಲ್ಲಿ ಪ್ರತಿ ವರ್ಷ ಪೊಂಗಲ್ ನಂತರದ 8ನೇ ದಿನದಂದು ಮಾಯಿಲೇರು ಎಂಬ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ನಿನ್ನೆ (ಜ.22) ಮಾಯಿಲೇರು ಉತ್ಸವ ಅದ್ಧೂರಿಯಿಂದ ನಡೆಯುತ್ತಿತ್ತು. ರಾತ್ರಿ ವೇಳೆ ಭಕ್ತರು ದೇವಿಗೆ ಮಾಲೆಗಳನ್ನು ಅರ್ಪಿಸಲು ಬೆನ್ನಿಗೆ ಈಟಿ ಚುಚ್ಚಿಕೊಂಡು ಕ್ರೇನ್‌ನಲ್ಲಿ ನೇತಾಡುವ ಮೂಲಕ ಅತ್ಯಂತ ವಿಶಿಷ್ಠವಾಗಿ ಹರಕೆ ತೀರಿಸುತ್ತಿದ್ದರು. ಆದರೆ, ರಾತ್ರಿ 8.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕ್ರೇನ್ ದಿಢೀರ್ ಧರೆಗಪ್ಪಳಿಸಿತು.
ಈ ದುರಂತದಲ್ಲಿ ಭೂಬಾಲನ್ (40), ಜ್ಯೋತಿಬಾಬು (16), ಮುತ್ತುಕುಮಾರ್ (39) ಎಂಬ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂದು (ಜನವರಿ 23) ತಿರುವಳ್ಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ವ್ಯಕ್ತಿ ಚಿನ್ನಸ್ವಾಮಿ (85) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಸೂರ್ಯ (22), ಗಜೇಂದ್ರನ್ (25), ಹೇಮಂತ್ ಕುಮಾರ್ (16), ಅರುಣಕುಮಾರ್ (25), ಕಥಿರವನ್ (23) ಮತ್ತು ಅರುಣಾಚಲಂ (45) ಸೇರಿದಂತೆ ಅನೇಕ ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಚೆನ್ನೈನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭೀಕರ ಅಪಘಾತದ ಬಗ್ಗೆ ನೇಮಿಲಿ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವಘಡಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. "ಕ್ರೇನ್ ಬಳಸಲು ಅನುಮತಿ ಇರಲಿಲ್ಲ. ಕ್ರೇನ್ ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಯುತ್ತಿದೆ" ಎಂದು ರಾಣಿಪೇಟೆ ಜಿಲ್ಲಾಧಿಕಾರಿ ಭಾಸ್ಕರ್ ಪಾಂಡಿಯನ್ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಅಕ್ರಮ ವಾಸ: ಪಾಕಿಸ್ತಾನದ ಯುವತಿ, ಪ್ರಿಯತಮ ಪೊಲೀಸ್ ವಶಕ್ಕೆ