ಆಂಧ್ರಪ್ರದೇಶ/ಜಾರ್ಖಂಡ್:ಆಂಧ್ರಪ್ರದೇಶ ಮತ್ತು ಜಾರ್ಖಂಡ್ನಲ್ಲಿ ನಡೆದ ಪ್ರತ್ಯೇಕ ಅವಘಡಗಳಲ್ಲಿ 10 ಮಂದಿ ಸಾವನ್ನಪ್ಪಿದ ದುರ್ಘಟನೆ ಸೋಮವಾರ ನಡೆದಿದೆ. ಜಾರ್ಖಂಡ್ನ ಧನಬಾದ್ ಜಿಲ್ಲೆಯಲ್ಲಿ ರೈಲ್ವೆ ಕಂಬಿಗಳ ಅಳವಡಿಕೆ ವೇಳೆ ವಿದ್ಯುತ್ ಪ್ರವಹಿಸಿ 6 ಮಂದಿ ದಾರುಣವಾಗಿ ಅಂತ್ಯ ಕಂಡರೆ, ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಬಸ್ ಡಿಕ್ಕಿಯಾಗಿ ನಾಲ್ವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಪ್ರಾಣ ತೆಗೆದ ವಿದ್ಯುತ್:ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಕತ್ರಾಸ್ ನಿಲ್ದಾಣದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಜಾರ್ಖೋರ್ ಎಂಬಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಕೆ ಮಾಡುತ್ತಿದ್ದ ಗುತ್ತಿಗೆ ಕಾರ್ಮಿಕರಲ್ಲಿ 6 ಮಂದಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.
ಹೌರಾ - ನವದೆಹಲಿ ರೈಲು ಮಾರ್ಗದಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಕೆ ಮಾಡಲಾಗುತ್ತಿತ್ತು. ಈ ವೇಳೆ ಕಬ್ಬಿಣದ ಕಂಬಿಗಳ ಮೇಲೆ 25 ಸಾವಿರ ವೋಲ್ಟ್ ವಿದ್ಯುತ್ ತಂತಿ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ. ಕಂಬಿ ಹಿಡಿದಿದ್ದ ಕಾರ್ಮಿಕರು ವಿದ್ಯುತ್ ಶಾಕ್ಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಕಲ್ಕಾದಿಂದ ಹೌರಾಕ್ಕೆ ಹೋಗುವ ಡೌನ್ ನೇತಾಜಿ ಎಕ್ಸ್‌ಪ್ರೆಸ್, ಹೌರಾದಿಂದ ಬಿಕಾನೇರ್‌ಗೆ ಹೋಗುವ ಪ್ರತಾಪ್ ಎಕ್ಸ್‌ಪ್ರೆಸ್ ಸಂಚಾರ ನಿಲ್ಲಿಸಲಾಗಿದೆ. ರೈಲ್ವೆ ಅಧಿಕಾರಿಗಳು ಮತ್ತು ರೈಲ್ವೆ ವೈದ್ಯರು ಸ್ಥಳಕ್ಕೆ ತಲುಪಿದ್ದಾರೆ. ಅತ್ಯಧಿಕ ವಿದ್ಯುತ್ ಪ್ರವಹಿಸಿದ್ದರಿಂದ ಹಲವರು ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ರೂಪದಲ್ಲಿ ಬಂದ ಜವರಾಯ:ಇನ್ನೊಂದು ಘಟನೆಯಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಾಹನಕ್ಕೆ ಬಸ್ ಡಿಕ್ಕಿಯಾಗಿ ನಾಲ್ವರು ಕೂಲಿಕಾರ್ಮಿಕರು ಸಾವನ್ನಪ್ಪಿದ್ದಾರೆ. ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರಿಗೆ ಆರ್‌ಟಿಸಿ ಬಸ್ನ ರೂಪದಲ್ಲಿ ಸಾವು ಬಂದೊದಗಿದೆ.
ವಿಜಯವಾಡ ನಗರದ ವಾಂಬೆ ಕಾಲೋನಿಯ ಪಿಲ್ಲಿ ಶ್ರೀನು (35), ಚಂದ್ರಶೇಖರ್ (33), ಕೆ.ಶ್ರೀನು (22) ಮತ್ತು ಸಾಯಿ (32) ಮೃತರು. ಶುಭ ಕಾರ್ಯಗಳಲ್ಲಿ ಅಲಂಕಾರ ಕೆಲಸ ಮಾಡುವ ಕೂಲಿ ಕಾರ್ಮಿಕರು ಇವರಾಗಿದ್ದಾರೆ. ಅನಂತಪುರದಲ್ಲಿ ನಡೆದ ಶುಭ ಕಾರ್ಯಕ್ರಮಕ್ಕೆ ತೆರಳಿ ಅಲ್ಲಿ ಅಲಂಕಾರ ಕಾರ್ಯ ಮುಗಿಸಿದ್ದರು. ಬಳಿಕ ಕಾರಿನಲ್ಲಿ ತಮ್ಮ ಊರಾದ ವಿಜಯವಾಡಕ್ಕೆ ವಾಪಸ್ ಬರುತ್ತಿದ್ದರು. ವಿಜಯವಾಡದಿಂದ ಸತ್ಯಸಾಯಿ ಜಿಲ್ಲೆಯ ಹಿಂದೂಪುರಕ್ಕೆ ಹೋಗುತ್ತಿದ್ದಾಗ ಆರ್‌ಟಿಸಿ ಬಸ್ ಪ್ರಕಾಶಂ ಜಿಲ್ಲೆಯ ತ್ರಿಪುರಾಂತಕಂ ಮಂಡಲದ ಬಳಿ ಎದುರಿನಿಂದ ಬಂದು ರಭಸವಾಗಿ ಡಿಕ್ಕಿ ಹೊಡೆದಿದೆ.
ನಿದ್ರೆಯಲ್ಲಿದ್ದ ಕಾರ್ಮಿಕರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತೀವ್ರ ಗಾಯಗೊಂಡಿದ್ದ ಶ್ರೀನು ಚಿಕಿತ್ಸೆಗಾಗಿ ವಿನುಕೊಂಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಅಲ್ಲದೇ. ಅಶೋಕ್ ಮತ್ತು ರಾಜು ಎಂಬ ಇನ್ನಿಬ್ಬರು ಗಾಯಗೊಂಡಿದ್ದು, ವಿನುಕೊಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲೇ ಮೂರು ಮೃತದೇಹಗಳು ಸಿಲುಕಿದ್ದವು. ಸ್ಥಳೀಯರ ನೆರವಿನಿಂದ ಪೊಲೀಸರು ಹರಸಾಹಸಪಟ್ಟು ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
ಅಪಘಾತಕ್ಕೆ ಆರ್‌ಟಿಸಿ ಚಾಲಕನ ಅತಿವೇಗದ ಚಾಲನೆ ಅಥವಾ ನಿದ್ರೆಯ ಮಂಪರಿನಲ್ಲಿ ಕಾರ್ಮಿಕರಿದ್ದ ವಾಹನ ಡಿಕ್ಕಿಯಾಯಿಯೇ ಎಂಬ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ:ಖಾಸಗಿ ಬಸ್ ಮತ್ತು ಇನ್ನೋವಾ ಕಾರ್ ನಡುವೆ ಭೀಕರ ಅಪಘಾತ: 6 ಮಂದಿ ಸಾವು..